Oplus_0

ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ | ಅ.7 ರಂದು ಮಹರ್ಷಿ ವಾಲ್ಮೀಕಿ ಜಯಂತಿ ದಿನದಂದು ಹಾಜರಿದ್ದು ಯಶಸ್ವಿಗೊಳಿಸಿ: ತಹಸೀಲ್ದಾರ್ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಜಾ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಇದೇ ಅ.7 ರಂದು ಬೆಳಗ್ಗೆ 10 ಕ್ಕೆ ನಿಗದಿತ ಸಮಯಕ್ಕೆ ಸಮಾಜದ ಜನರು ಹಾಜರಿದ್ದು ಮಹರ್ಷಿ ವಾಲ್ಮೀಕಿ ಜಯಂತಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದರು.

ಪಟ್ಟಣದ ಪ್ರಜಾ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ತಾಲೂಕಿನ ಕಚೇರಿಯಲ್ಲಿ, ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಹಸೀಲ್ ಕಚೇರಿಯಲ್ಲಿ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದರು.

ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ್ ದೊರೆ ಮಾತನಾಡಿ, ಈ ಬಾರಿ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಅವರ ದಿನಾಂಕ ತೆಗೆದುಕೊಂಡು ಸಮಾಜದವರು ನಿರ್ಧಾರ ಮಾಡಿದ್ದಾರೆ ಹೀಗಾಗಿ ತಾಲೂಕು ಆಡಳಿತ ಇದಕ್ಕೆ ಸಮ್ಮತಿ ನೀಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಮೊದಲೆ ಮಾಹಿತಿ ನೀಡಿ ನಾವು ಅದರಂತೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಅವರು ಹೇಳಿದರು.

ಯುವ ಅಧ್ಯಕ್ಷ ರಾಜು ದೊರೆ ಮಾತನಾಡಿ, ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಿ ಸುಮಾರು ವರ್ಷಗಳಾಗಿದೆ ಆದರೂ ಇಲ್ಲಿವರೆಗೆ ನಮಗೆ ಹಸ್ತಾಂತರ ಮಾಡಿಲ್ಲ, ಈಗ ಅಲ್ಲಿ ಗಿಡಗಂಟಿಗಳು ಬೆಳೆದು ಪರಿಸರ ಹದಗೆಟ್ಟಿದೆ ಅದು ಉಪಯೋಗಕ್ಕೆ ಬಾರದಂತೆ ಆಗಿದೆ ಆದ್ದರಿಂದ ಕೂಡಲೇ ಭವನದ ಸ್ವಚ್ಛತೆ ಮಾಡಿ ಸಮಾಜದ ಕಾರ್ಯಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಮಾತನಾಡಿ, ಅಲ್ಲಿನ ವಸ್ತುಸ್ಥಿತಿ ಪರೀಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಗ್ರೇಡ್ 2 ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪಶು ಅಧಿಕಾರಿ ಡಾ.ಶಂಕರ ಕಣ್ಣಿ, ಅರಣ್ಯ ಅಧಿಕಾರಿ ಜಾವೀದ್, ವಿಠಲ್ ರಾವ್, ಸಮಾಜದ ಮುಖಂಡರಾದ ಮಹಾದೇವ ಚೂರಿ ಬೊಮ್ಮನಳ್ಳಿ, ಸಾಬಣ್ಣ ಮುಸುಲಾ, ಹಣಮಂತ ಗಲಿಗಿನ್, ಹುಸನಪ್ಪ ಲಾಡ್ಲಾಪೂರ, ಭಾಗು ದೊರೆ, ಮೌನೇಶ್ ಲಾಡ್ಲಾಪೂರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!