Oplus_0

ಚಿತ್ತಾಪುರ ಪಟ್ಟಣದಲ್ಲಿ ಅಭಿಮಾನಿಗಳಿಂದ ಜನ್ಮದಿನಾಚರಣೆ | ಪ್ರಿಯಾಂಕ್ ಖರ್ಗೆ ಸೋಲಿಸುವುದೇ ಏಕೈಕ ಅಜೆಂಡಾ: ಮಣಿಕಂಠ ರಾಠೋಡ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನೇ ಟಿಕೆಟ್ ನೀಡುವ ಭರವಸೆ ಇದೆ, ಒಂದು ವೇಳೆ ಬೇರೆ ಯಾರಿಗೂ ಟಿಕೆಟ್ ಸಿಕ್ಕರೆ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಈ ನಿಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಸೋಲಿಸುವುದೇ ನನ್ನ ಏಕೈಕ ಅಜೆಂಡಾ ಆಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಕಳೆದ ಚುನಾವಣೆಯಲ್ಲಿ 26 ವರ್ಷದ ಚಿಕ್ಕ ವಯಸ್ಸಿನಲ್ಲಿ ನನಗೆ ಟಿಕೆಟ್ ನೀಡಿ ಆಶೀರ್ವಾದ ಮಾಡಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿಯೂ ನನಗೆ ಟಿಕೆಟ್ ನೀಡುವ ಸಂಪೂರ್ಣ ವಿಶ್ವಾಸವಿದೆ. ಪ್ರಿಯಾಂಕ್ ಖರ್ಗೆ ಹಗರಣಗಳು ಬಯಲಿಗೆ ತರುವುದು ಹಾಗೂ ಅವರ ಗುಂಡಾಗೀರಿ, ದಾದಾಗಿರಿಯನ್ನು ನಿಲ್ಲಿಸುವುದೇ ನನ್ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ತಮ್ಮ ಕುಟುಂಬದ ಹೆಸರನ್ನು ಹೇಳಿಕೊಂಡು ಗಡ್ಡ ಬಿಟ್ಟುಕೊಂಡು ಷಡ್ಯಂತ್ರದಿಂದ ನನ್ನನ್ನು ಸೋಲಿಸಲಾಯಿತು. ಚಿತ್ತಾಪುರ ಇತಿಹಾಸದಲ್ಲೇ ಬಿಜೆಪಿಗೆ 67683 ಮತಗಳು ಹಾಕಿ ಜನ ಆಶೀರ್ವಾದ ಮಾಡಿದ್ದಾರೆ. ನಮ್ಮ ಕುಟುಂಬದಲ್ಲಿ ಗ್ರಾಪಂ ಸದಸ್ಯರು ಇಲ್ಲ ಹೀಗಾಗಿ ಸ್ವಲ್ಪ ಅನುಭವದ ಕೊರತೆಯಿಂದ ಹಾಗೂ ಪ್ರಿಯಾಂಕ್ ಖರ್ಗೆ ಷಡ್ಯಂತ್ರದಿಂದ ಅಲ್ಪ ಮತಗಳಿಂದ ಸೋತಿದ್ದೇನೆ ಎಂದು ಹೇಳಿದರು.

ಚಿತ್ತಾಪುರದ ಮಹಾಜನತೆ ನನ್ನನ್ನು ಚುನಾವಣೆಗಷ್ಟೇ ಸೀಮಿತ ಮಾಡದೇ ಈಗಲೂ ಮನೆ ಮಗನಂತೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ, ನನ್ನ ಬಗ್ಗೆ ಅಪಾರವಾದ ಕಾಳಜಿ ಇಟ್ಟಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಯಾರ್ಯಾರೋ ಬಂದು ಗೊಂದಲ ಮೂಡಿಸಿದರೆ ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಎಷ್ಟೇ ಆಕಾಂಕ್ಷಿಗಳು ಬಂದರೆ ಬರಲಿ ಇದರಿಂದ ಪಕ್ಷ ಇನ್ನಷ್ಟು ಬಲಿಷ್ಠ ಆಗುತ್ತದೆ ಎಂದರು.

ನನ್ನನ್ನು ಷಡ್ಯಂತ್ರದಿಂದ 2024 ಡಿಸೆಂಬರ್ ನಲ್ಲಿ ಗಡಿಪಾರು ಮಾಡಿಸಿದ್ದರು, ಹೀಗಾಗಿ ಕ್ಷೇತ್ರಕ್ಕೆ ಬರುವುದಕ್ಕೆ ಆಗಲಿಲ್ಲ. ನನ್ನ ಮೇಲೆ ಎಷ್ಟೇ ಸುಳ್ಳು ಕೇಸುಗಳು ಹಾಕಿ ಜೈಲಿಗೆ ಕಳುಹಿಸಿದರೂ ನಾನು ಮತ್ತೇ ಎದ್ದು ನಿಲ್ಲುವ ಶಕ್ತಿ ಚಿತ್ತಾಪುರದ ಮಹಾಜನತೆ ನೀಡಿದ್ದಾರೆ ಎಂದು ತಿಳಿಸಿದರು.

ಈಚೆಗೆ ಚಿತ್ತಾಪುರದಲ್ಲಿ ತಂದೆ ಮಗ ಸೇರಿ ಕಾರ್ಯಕ್ರಮ ಮಾಡಿದ್ದರೂ ಸಹ ಹಣ ಕೊಟ್ಟು ಜನರನ್ನು ಕರೆಯಿಸುವ ಪರಿಸ್ಥಿತಿ ಬಂತು, ಪ್ರೀತಿಯಿಂದ ಯಾರೂ ಬರಲಿಲ್ಲ. ಆದರೆ ನನಗೆ ಹೋದಲೆಲ್ಲಾ ಜನರು ಡೊಳ್ಳು ಬಾಜಾ ಭಜಂತ್ರಿಯಿಂದ ಸ್ವಾಗತಿಸಿ ಪಟಾಕಿ ಸಿಡಿಸಿ ಹಾರಾ ಶಾಲು ಹಾಕಿ ಆಶೀರ್ವದಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶ್ವಥ್ ರಾಠೋಡ ಮಾತನಾಡಿದರು. ಶ್ರೀಕಾಂತ್ ಸುಲೇಗಾಂವ, ಜಿ.ಎಸ್.ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಸೇರಿದಂತೆ ಇತರರು ಇದ್ದರು.

“ನೂರು ಸಾರಿ ಕೇಸುಗಳು ಹಾಕಿ ಹತ್ತು ಸಾರಿ ಜೈಲಿಗೆ ಕಳುಹಿಸಿದರೂ ಚಿತ್ತಾಪುರ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಇದೇ ನನ್ನ ಪ್ರಿಯಾಂಕ್ ಖರ್ಗೆ ಗೆ ನೀಡುವ ಗಿಫ್ಟ್”.-ಮಣಿಕಂಠ ರಾಠೋಡ ಬಿಜೆಪಿ ಮುಖಂಡರು.

Spread the love

Leave a Reply

Your email address will not be published. Required fields are marked *

error: Content is protected !!