ಚಿತ್ತಾಪುರ ಸಾವಿರ ಮನೆಗಳ ಹಂಚಿಕೆ ಪಾರದರ್ಶಕ, ಅಂಗವಿಕಲರಿಗೆ ಮಾತ್ರ ನೆಲಮಹಡಿಯ ಮನೆಗಳು ಹಂಚಿಕೆ: ಡಿಸಿ ಫೌಜಿಯಾ ತರನ್ನುಮ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: 1000 (ಜಿ+1) ಮನೆಗಳ ಹಂಚಿಕೆಯು ಪಾರದರ್ಶಕವಾಗಿ ಮಾಡಲಾಗಿದ್ದು, ಇಲ್ಲಿ ಯಾವುದೇ ಬದಲಾವಣೆಗೆ ಅಥವಾ ತಿದ್ದುಪಡಿಗೆ ಅವಕಾಶ ಇಲ್ಲ, ಬರೀ ಅಂಗವಿಕಲರ ಫಲಾನುಭವಿಗಳಿಗೆ ಮಾತ್ರ ಮಾದಲ ಆದ್ಯತೆಯಾಗಿ ನೆಲಮಹಡಿಯ ಮನೆಗಳು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ‘ಸರ್ವರಿಗೂ ಸೂರು’ ಚಿತ್ತಾಪೂರ ತಾಲ್ಲೂಕಿನಲ್ಲಿ ಪೂರ್ಣಗೊಂಡಿರುವ 1000 (ಜಿ+1) ಮನೆಗಳ ಹಂಚಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಮನೆಗಳಿಂದ ಜೀವನ ಶೈಲಿ ಬದಲಾವಣೆ ಆಗಲಿ, ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮನೆಗಳ ಪಟ್ಟಿಗೆ ಜಿಲ್ಲಾಧಿಕಾರಿ ಸಹಿ ಹಾಕಿದ ಪ್ರತಿ ಪುರಸಭೆ ಆಡಳಿತಕ್ಕೆ ಹಸ್ತಾಂತರ ಮಾಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ ಅವರು ಮಾತನಾಡಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ಶ್ರೀಧರ್ ಸಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಕೊಳಗೇರಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಖಯುಮ್ಮ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಜೆಇ ಚೇತನ್, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ಶೀಲಾ ಕಾಶಿ, ಶ್ರೀನಿವಾಸ ರೆಡ್ಡಿ ಪಾಲಪ್, ಸಂತೋಷ್ ಚೌದರಿ, ವಿನೋದ ಗುತ್ತೇದಾರ, ರಸೂಲ್ ಮುಸ್ತಫಾ, ಶಿವರಾಜ್ ಪಾಳೇದ್, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಸಂತೋಷ ಪೂಜಾರಿ, ಸಂಜಯ ಬುಳಕರ್, ರವಿಸಾಗರ ಹೊಸಮನಿ ಸೇರಿದಂತೆ ಇತರರು ಇದ್ದರು. ಪುರಸಭೆ ಅಧಿಕಾರಿ ವಿಠಲ್ ಹಾದಿಮನಿ ನಿರೂಪಿಸಿದರು.

