ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಡಿಗರ ಜಾಗೃತಿ ಸಭೆ | ಈಡಿಗರ ಹಕ್ಕಿಗಾಗಿ ಹೋರಾಟ ಅನಿವಾರ್ಯ: ಪ್ರಣವಾನಂದ ಸ್ವಾಮೀಜಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ ನ್ಯಾಯಕ್ಕಾಗಿ ಹಾಗೂ ಹಕ್ಕುಗಳು ಪಡೆಯಲು ಹೋರಾಟ ಅನಿವಾರ್ಯವಾಗಿದೆ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ.ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅಳ್ಳೋಳ್ಳಿ, ಡೋಣಗಾಂವ, ಭೀಮನಳ್ಳಿ, ಭಂಕಲಗಿ, ಹೊಸ್ಸುರ, ಸಾತನೂರು, ಲಾಡ್ಲಾಪೂರ, ನಾಲವಾರ, ತರಕಸಪೇಟ್, ರಾಂಪೂರಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಈಡಿಗರ ಜಾಗೃತಿ ಸಭೆ ನಡೆಸಿದ ಶ್ರೀಗಳು, ಈಡಿಗ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಜ.6 ರಿಂದ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಚಿಂಚೋಳಿ ಯಿಂದ ಕಲಬುರಗಿ ಹಾಗೂ ಮಂಗಳೂರು ದಿಂದ ಬೆಂಗಳೂರು ವರೆಗೆ ಹಾಗೂ ಕಲಬುರ್ಗಿಯಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಒಂದಿಲ್ಲೊಂದು ಹೋರಾಟಗಳು ನಡೆಯುತ್ತಿವೆ. ಆದರೂ ಆಳುವ ಸರ್ಕಾರಗಳು ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸುವ ಮನಸ್ಸು ಮಾಡುತ್ತಿಲ್ಲ, ಹೀಗಾಗಿ ಈಗ ಮತ್ತೇ 700 ಕಿ.ಮೀ 41 ದಿನಗಳ ಕಾಲ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳಲಾಗಿದೆ ಹೀಗಾಗಿ ಸಮಾಜ ಬಂಧುಗಳು ಎಲ್ಲರೂ ಒಗ್ಗೂಡಿ ಕೈಜೋಡಿಸಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಜ.6 ಅಂದು ಬೆಳಗ್ಗೆ 9.30 ಕ್ಕೆ ಎಲ್ಲರೂ ಕರದಾಳ ಶಕ್ತಿ ಪೀಠದ ಹತ್ತಿರ ಸೇರಬೇಕು, ಅಲ್ಲಿಂದ ಅತೀ ಹಿಂದುಳಿದ ಮಠಾಧೀಶರಿಂದ ಪಾದಯಾತ್ರೆ ಚಾಲನೆಗೊಳ್ಳಲಿದೆ. ನಂತರ ಮಧ್ಯಾಹ್ನ 12.30 ಕ್ಕೆ ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಲಿದೆ. ಅಂದು ಚಿತ್ತಾಪುರದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಮತ್ತೇ ಜ.7 ರಂದು ಬೆಳಗ್ಗೆ 9 ಗಂಟೆಗೆ ರಾವೂರ ಮಾರ್ಗದ ಕಡೆ ಪಾದಯಾತ್ರೆ ನಡೆಯಲಿದೆ ಹೀಗಾಗಿ ಕುಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ಮುಖಂಡರಾದ ಶ್ರೀಶೈಲ್ ಗುತ್ತೇದಾರ, ಶ್ರೀಮಂತ ಗುತ್ತೇದಾರ, ಕಾಶಿನಾಥ ಗುತ್ತೇದಾರ, ರವಿ ಸೂಲಹಳ್ಳಿ, ಶರಣಬಸಪ್ಪ ಗುತ್ತೇದಾರ, ಹಣಮಯ್ಯ ಗುತ್ತೇದಾರ, ಚಿನ್ನಯ್ಯ ಗುತ್ತೇದಾರ, ಸೈದಣ್ಣ ಗುತ್ತೇದಾರ, ಶ್ರೀನಿವಾಸ ಗುತ್ತೇದಾರ, ಶರಣಯ್ಯ ಗುತ್ತೇದಾರ, ನರಸಯ್ಯ ಗುತ್ತೇದಾರ, ರಮೇಶ್ ಗುತ್ತೇದಾರ ಸೇರಿದಂತೆ ಇತರರು ಇದ್ದರು.

