ತರಕಾರಿ ಬೀಜಗಳ ಕಿಟ್ ವಿತರಣೆ | ರೈತರ ಅಭ್ಯುದಯಕ್ಕೆ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಾಂಗ್ರೆಸ್ ಸರ್ಕಾರ ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ರೂ 2590 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ 656 ಕೋಟಿ ಬೆಳೆ ವಿಮೆ ಸೇರಿದೆ. ಇಷ್ಟೊಂದು ಮೊತ್ತದ ಪರಿಹಾರ ಪಡೆದುಕೊಂಡ ಜಿಲ್ಲೆ ರಾಜ್ಯದಲ್ಲಿ ಮತ್ತೊಂದಿಲ್ಲ. ಜಿಲ್ಲೆಯಲ್ಲಿ ತೊಗರಿಗೆ ನೆಟೆ ರೋಗ ಬಂದು 2 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾದಾಗ ರೂ.182 ಕೋಟಿ ಬಿಡುಗಡೆ ಮಾಡಿದ್ದೇವೆ. ಆದರೆ, ಇದೇ ತರ ಜಿಲ್ಲೆಯ ರೈತರು ನೆರೆ ಹಾಗೂ ಬರದಿಂದ ನಷ್ಟ ಅನುಭವಿಸಿದಾಗ ಅಂದಿನ ಬಿಜೆಪಿ ಸರ್ಕಾರ ಜಿಲ್ಲೆಗೆ ಕೇವಲ 22 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು ಎಂದು ನೆನಪಿಸಿದರು.
ಕೇಂದ್ರ ಸರ್ಕಾರ ನಮ್ಮ ರೈತರ ವಿರೋಧಿ ನಿಲುವು ತೆಗೆದುಕೊಂಡು ಬಿಡುಗಡೆ ಮಾಡಬೇಕಾದ ಅನುದಾನ ತಡೆಹಿಡಿದಿದ್ದರಿಂದ ರಾಜ್ಯದ ಇಡೀ ಸಚಿವ ಸಂಪುಟ ದೆಹಲಿಯಲ್ಲಿ ಪ್ರತಿಭಟನೆ ಮಾಡಿತ್ತು. ಇತಿಹಾಸದಲ್ಲಿ ರಾಜ್ಯ ಸರ್ಕಾರವೊಂದು ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದ್ದು ಇದೇ ಮೊದಲು. ಅಷ್ಟಾದರೂ ಕೇಂದ್ರ ಬಗ್ಗದಿದ್ದಾಗ ಕೊನೆಗೆ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಹಾಕಿದಾಗ ಸುಪ್ರಿಂ ಕೋರ್ಟ್ ಛೀಮಾರಿ ಹಾಕಿದ್ದರಿಂದ ಅನುದಾನ ಬಿಡುಗಡೆ ಮಾಡಿತ್ತು. ಇದು ರೈತರ ಪರವಾದ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕೋಲ್ಡ್ ಸ್ಟೋರೆಜ್ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಪಲ್ಸ್ ಪ್ರೋಟಿನ್ ಹಬ್ ಮಾಡುವ ಯೋಜನೆಗಳಿವೆ. ಈಗಾಗಲೇ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡುವ ಯಂತ್ರಗಳನ್ನು ಪರಿಚಯಿಸಲಾಗಿದೆ. ಇನ್ನು ಮುಂದೆಯೂ ಕೂಡಾ ತಂತ್ರಜ್ಞಾನ ಬಳಕೆ ಮಾಡಿಕೊಂಡು ರೈತರಿಗೆ ಮತ್ತಷ್ಟು ಸುಧಾರಿತ ಯಂತ್ರಗಳನ್ನು ಒದಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ಜೊತೆಗೆ ಡಿಎಪಿ ಬದಲಿಗೆ ಸಾವಯವ ಗೊಬ್ಬರ ಬಳಕೆ ಕುರಿತಂತೆ ಮಾಹಿತಿ ಒದಗಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಚಿತ್ತಾಪುರ ಹಣೆಬರಹ ಬರೆಯುವವರೇ ಪ್ರಿಯಾಂಕ್ ಖರ್ಗೆ. ಹೀಗಾಗಿ ಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಅರ್ಹ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ, ವಿರೋಧ ಪಕ್ಷದ ಯಾವುದೇ ಅಭ್ಯರ್ಥಿ ಗೆಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಕಲಬುರಗಿ ಪಬ್ಲಿಕ್ ಗಾರ್ಡನಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಸ್ಥಳಾವಕಾಶ ಮಾಡಿಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದಗಳು ಸಲ್ಲಿಸಿದರು. ಹಾಗೂ ಕೂಡಲೇ ಕೋಲಿ ಕಬ್ಬಲಿಗ ಪರ್ಯಾಯ ಪದಗಳು ಎಸ್ಟಿ ಸೇರ್ಪಡೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಮನವಿ ಮಾಡಿದರು.
ಎಂಎಲ್ಸಿ ಜಗದೇವ ಗುತ್ತೇದಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಬಂದ ಮೇಲೆ ಚಿತ್ತಾಪುರ ಹಾಗೂ ಕಲಬುರಗಿ ಚಿತ್ರಣವೇ ಬದಲಾಗಿದೆ, ಮಲ್ಲಿಕಾರ್ಜುನ ಖರ್ಗೆ 371ಜೆ ಕಲಂ ನೀಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಅದೇ ರೀತಿ ಪ್ರಿಯಾಂಕ್ ಖರ್ಗೆ ತಂದೆಗೆ ತಕ್ಕ ಮಗನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಮತ್ತು ವಿಧಾನ ಪರಿಷತ್ ನಲ್ಲಿ ಹಾಗೂ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಎಂದು ಬಣ್ಣಿಸಿದರು.
ತೊಗರಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ ಸಾಹೇಬ್, ಕೆಕೆಆರ್’ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಎಸಿ ಪ್ರಭು ರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವ್ ಮಾನಕರೆ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಡಾ.ಮಹಾಂತಗೌಡ ಪಾಟೀಲ, ದೇವಿಂದ್ರ ಯಾಬಾಳ, ಸಂಜಯ್ ಬುಳಕರ್ ಸೇರಿದಂತೆ ಇತರರು ಇದ್ದರು. ಸಂತೋಷ ಇನಾಮದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ತೋಟಗಾರಿಕೆ ಅಧಿಕಾರಿ ರಾಜಕುಮಾರ್ ವಂದಿಸಿದರು.

