ಚಿತ್ತಾಪುರದಲ್ಲಿ ಹಾಡುಹಗಲೇ ರಾಜಾರೋಷವಾಗಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ನಾಗಾವಿ ಎಕ್ಸಪ್ರೆಸ್ ವಿಶೇಷ ವರದಿ
ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹಾಡು ಹಗಲೇ ರಾಜಾರೋಷವಾಗಿ ಟಂಟಂ, ಗೂಡ್ಸ್ ವಾಹನ, ಒಂಟ್ ಬಂಡಿ ಮೂಲಕ ಅಕ್ರಮವಾಗಿ ಅಕ್ಕಿ ಸಾಗಾಟ ನಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಇದಕ್ಕೆ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾರೆ.
ಬಡವರಿಗೆ ಹಂಚಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಪಾಲಿಷ್ ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಸಹ ಕಂದಾಯ ಇಲಾಖೆ, ಆಹಾರ ಇಲಾಖೆ, ಪೊಲೀಸ್ ಅಧಿಕಾರಿಗಳು ಮಾತ್ರ ಗಮನ ಹರಿಸದೇ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಿನ ಹಳ್ಳಿ ಹಳ್ಳಿಗೂ ಅಕ್ಕಿ ತುಂಬಿಕೊಳ್ಳಲು ಯುವಕರನ್ನು, ಕೂಲಿಕಾರ್ಮಿಕರನ್ನು ಬಿಟ್ಟು ಮನೆ ಮನೆಗೆ ತೆರಳಿ ಅಕ್ಕಿಯನ್ನು ಅವರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು, ಅದನ್ನು ಸಂಗ್ರಹ ಮಾಡಿ ನಂತರ ಅದನ್ನು ದೊಡ್ಡ ವಾಹನದ ಮೂಲಕ ಮತ್ತು ಗೂಡ್ಸ್ ವಾಹನದಲ್ಲಿ ಅದನ್ನು ಸಾಗಾಟ ಮಾಡುವ ದಂದೆ ಜೋರಾಗಿ ನಡೆದಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ಸರ್ಕಾರರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಅಕ್ಕಿಯನ್ನು ಜನರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಹೆಚ್ಚಿನ ದರಕ್ಕೆ ಸಾಗಿಸುತ್ತಿರುವ ದಂಧೆ ಸಕ್ರಿಯವಾಗಿದೆ. ಅಲ್ಲದೇ ಹಾಡುಹಗಲೇ ಮತ್ತು ರಾತ್ರೋರಾತ್ರಿ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಚೀಲಗಳನ್ನು ಬದಲಾಯಿಸಿ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿರುವ ದಂಧೆ ಎಗ್ಗಿಲ್ಲದೆ ನಡೆದಿದೆ.
ಜನಸಾಮಾನ್ಯರಿಂದ ಕಡಿಮೆ ಬೆಲೆಗೆ ಖರೀದಿಸಿದ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹಗಲಿನಲ್ಲಿಯೇ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಚೀಲಗಳನ್ನು ಬದಲಾಯಿಸಿ, ಗೂಡ್ಸ್ ವಾಹನಗಳ ಮೂಲಕ ಬೇರೆ ರಾಜ್ಯಗಳಿಗೆ, ವಿಶೇಷವಾಗಿ ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್‌ಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆಕ್ರಮವಾಗಿ ನಡೆಯುತ್ತಿರುವ ಅಕ್ಕಿ ದಂಧೆಗೆ ಕಡಿವಾಣ ಹಾಕುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

