ಚಿತ್ತಾಪುರದಲ್ಲಿ ಮಹಾಮಳೆ ಆರ್ಭಟ: ಜಲಾವೃತಗೊಂಡ ವಸತಿ ನಿಲಯಗಳು, ವಿದ್ಯಾರ್ಥಿಗಳ ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಬುಧವಾರ ರಾತ್ರಿಯಿಡಿ ಸುರಿದ ಭಾರೀ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಿನ್ನೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ವಸತಿ ನಿಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಆವರಣಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಶಹಾಬಾದ ರಸ್ತೆಯ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಸತಿ ನಿಲಯ ಆವರಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು ಪರದಾಡಿದರು.
ವಸತಿ ನಿಲಯದ ಪ್ರವೇಶ ದ್ವಾರದಲ್ಲೇ ಮಳೆ ನೀರು ತುಂಬಿ ನಿಂತಿದೆ. ಇವುಗಳ ನಡುವೆಯೇ ವಿದ್ಯಾರ್ಥಿನಿಯರು ಹೊರಗೆ ಬರಲು ಅಥವಾ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಸೊಂಟದವರೆಗೂ ಆವರಿಸಿರುವ ನೀರಿನಲ್ಲಿ ನಡೆದುಕೊಂಡು ಹೋಗುವುದು ಅವರಿಗೆ ಸವಾಲಾಗಿದೆ. ಈ ಕಾರಣದಿಂದಾಗಿ, ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿ ಶಾಲಾ ಕಾಲೇಜುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆ ಪ್ರಮಾಣ-ಚಿತ್ತಾಪುರ: 50.2 ಮಿ.ಮೀ, ನಾಲವಾರ: 70.6 ಮಿ.ಮೀ ಅತಿ ಹೆಚ್ಚು ಮಳೆ, ಆಳ್ಳೋಳ್ಳಿ: 40.8 ಮಿ.ಮೀ, ಗುಂಡಗುರ್ತಿ: 6.4 ಮಿ.ಮೀ.
ಸಂಜೆ 4ರಿಂದ 6 ಗಂಟೆವರೆಗೆ ಸುರಿದ ಗುಡುಗು ಸಹಿತ ಮಳೆಯು ಚಿತ್ತಾಪುರ ನಗರ ಸೇರಿದಂತೆ ನಾಲವಾರ, ಆಳ್ಳೋಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಸಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 2-3 ದಿನಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆಯಿಂದಾಗಿ ಉಂಟಾದ ಹಾನಿ ಹಾಗೂ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

