ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಈಡಿಗ ಸಮುದಾಯದ 110 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ.7.5 ಲಕ್ಷ ವಿದ್ಯಾರ್ಥಿವೇತನ ವಿತರಣೆ, ‘YOUTHS OF JPNP’ ಯುವಶಕ್ತಿ ಪಡೆ ಲಾಂಛನ ಅನಾವರಣ | ಸಮಾಜದ ಸಮಗ್ರ ಪ್ರಗತಿಗಾಗಿ ಮಹಿಳಾ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುವುದು ಅನಿವಾರ್ಯ: ಸುಧಾಕರ್
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಸಂಸ್ಥಾಪಕ ಅಧ್ಯಕ್ಷ ಜೆ.ಪಿ. ಸುಧಾಕರ್ ಅವರು ಈಡಿಗ ಸಮಾಜದಲ್ಲಿ ಇನ್ನೂ ಶಿಕ್ಷಣದ ಕೊರತೆ ಇರುವುದನ್ನು ನಾವು ಗಂಭೀರವಾಗಿ ಅರಿತುಕೊಳ್ಳಬೇಕಿದೆ. ಅದರಲ್ಲೂ ಮಹಿಳೆಯರಲ್ಲಿ ಶಿಕ್ಷಣದ ಅಭಾವ ಹೆಚ್ಚಾಗಿ ಕಾಣಿಸುತ್ತಿದ್ದು, ಸಮಾಜದ ಸಮಗ್ರ ಪ್ರಗತಿಗಾಗಿ ಮಹಿಳಾ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುವುದು ಅನಿವಾರ್ಯವಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಜೆ.ಪಿ. ಸುಧಾಕರ್ ಹೇಳಿದರು.
ಅವರು ನಗರದ ಶೇಷಾದ್ರಿಪುರಂನ ಈಡಿಗರ ಸಂಘದ ಸಮುದಾಯ ಭವನದಲ್ಲಿ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 9 ಜಿಲ್ಲೆಗಳ ಈಡಿಗ ಸಮುದಾಯದ 110 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ರೂ.7.5 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ ಹಾಗೂ ಶ್ರೀ ಜೆ.ಪಿ. ನಾರಾಯಣಸ್ವಾಮಿ ಅವರ ಸೇವೆಯ ಸ್ಮರಣಾರ್ಥವಾಗಿ ಸ್ಥಾಪಿಸಿರುವ ‘YOUTHS OF JPNP’ ಲಾಂಛನವನ್ನು ಅನಾವರಣಗೊಳಿಸಿ ಮಾತಾಡಿದರು.
ಅಗತ್ಯವಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಸೂಕ್ತ ವಿದ್ಯಾಭ್ಯಾಸದ ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸಮಾಜದಿಂದ ದೊರಕುವ ನೆರವು, ಪ್ರತಿಷ್ಠಾನಗಳ ಸಹಕಾರ ಹಾಗೂ ಪೋಷಕರು ಹಾಕುವ ಶ್ರಮವನ್ನು ಮನಗಂಡು, ಕೃತಜ್ಞತೆಯೊಂದಿಗೆ ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಜೀವನದಲ್ಲಿ ಉನ್ನತ ಗುರಿಗಳನ್ನು ಸಾಧಿಸಬೇಕು. ಶಿಕ್ಷಣದ ಮೂಲಕ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡು, ಮುಂದಿನ ದಿನಗಳಲ್ಲಿ ಸಮಾಜದ ಋಣವನ್ನು ತೀರಿಸುವ ಮನೋಭಾವವನ್ನು ಬೆಳೆಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ವಿಶೇಷ ಆಹ್ವಾನಿತ ಚಲಪತಿ ಅವರು ಮಾತನಾಡಿ, ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಸಮಾಜಮುಖಿ ಸೇವಾ ಕಾರ್ಯಗಳು ನನಗೆ ಅಪಾರ ಪ್ರೇರಣೆ ನೀಡಿವೆ. ಶಿಕ್ಷಣದ ಮೂಲಕ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರತಿಷ್ಠಾನದ ನಿಸ್ವಾರ್ಥ ಸೇವೆಯನ್ನು ಮನಗಂಡು ನಾನು ಪ್ರತಿಷ್ಠಾನಕ್ಕೆ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಧ್ಯೇಯ ಹಾಗೂ ಉದ್ದೇಶಗಳಿಗೆ ಬದ್ಧನಾಗಿ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತಿಷ್ಠಾನದ ಬೆಳವಣಿಗೆಗೆ ಕೈಜೋಡಿಸುವೆ ಎಂದು ಹೇಳಿದರು.
ವಿಶೇಷ ಆಹ್ವಾನಿತ ಕೆ.ಎನ್. ಮಂಜುನಾಥ್ ಅವರು ಮಾತನಾಡಿ, ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನವು ಶಿಕ್ಷಣ, ಸೇವೆ ಮತ್ತು ಸಂಘಟನೆಯ ತತ್ವದ ಮೇಲೆ ನಿಂತು ಸಮಾಜದಲ್ಲಿ ಸಾರ್ಥಕ ಬದಲಾವಣೆ ತರಲು ಕಾರ್ಯನಿರ್ವಹಿಸುತ್ತಿದೆ. ಇಂತಹ ಮೌಲ್ಯಾಧಾರಿತ ಪ್ರತಿಷ್ಠಾನಕ್ಕೆ ಸೇರ್ಪಡೆಯಾಗಿರುವುದು ನನಗೆ ಸಂತೋಷ ಹಾಗೂ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವ ಜೊತೆಗೆ, ಈಡಿಗ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ನನ್ನ ಶಕ್ತಿಮಟ್ಟಿಗೆ ಸಹಕಾರ ನೀಡುವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಲಭ್ಯವಿರುವ ಶೈಕ್ಷಣಿಕ ಸಾಲ ಸೌಲಭ್ಯಗಳು ಹಾಗೂ ಜೀವನದಲ್ಲಿ ಆರ್ಥಿಕ ಭದ್ರತೆಗಾಗಿ ಜೀವ ವಿಮೆಯ ಮಹತ್ವದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಭವಿಷ್ಯದ ಆರ್ಥಿಕ ಯೋಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿಷ್ಠಾನದ ಮಹಾಪೋಷಕಿ ಲತಾ ಸುಧಾಕರ್ ಅವರು ಮಾತನಾಡಿ, ನಮ್ಮ ಪೂರ್ವಜರು ಸಾಂಪ್ರದಾಯಿಕ ಶಿಕ್ಷಣವಿಲ್ಲದಿದ್ದರೂ ಜ್ಞಾನಿಗಳಾಗಿದ್ದರು. ದಾರ್ಶನಿಕ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದ ಬೆಳಕಿನಲ್ಲಿ ಯುವ ಪೀಳಿಗೆಯವರು ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು. ಲಭ್ಯವಿರುವ ಮಾಹಿತಿಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಲ್. ಶಿವಾನಂದ್ ಅವರು ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯ ಹಂಬಲವನ್ನು ಜೀವನದಲ್ಲಿ ಅಳವಡಿಸಿಕೊಂಡು, ಅಹಂಕಾರಕ್ಕೆ ಅವಕಾಶ ನೀಡದೆ ಶಿಕ್ಷಣವನ್ನು ಪೂರ್ಣಗೊಳಿಸಬೇಕು. ಪ್ರತಿಷ್ಠಾನದಿಂದ ದೊರಕಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂರು ಮಹತ್ವದ ಸೂತ್ರಗಳನ್ನು ವಿವರಿಸಿದರು. “ಒಂದನೆಯದು ಸರ್ಕಾರಿ ಕೆಲಸ – ಸೇವಾಭಾವದೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವ ಅವಕಾಶ, ಎರಡನೆಯದು ಖಾಸಗಿ ಕೆಲಸ – ಶಿಸ್ತು, ಸ್ಪರ್ಧಾತ್ಮಕತೆ ಮತ್ತು ವೃತ್ತಿಪರ ಬೆಳವಣಿಗೆ, ಮೂರನೆಯದು ಸ್ವಂತ ಕೆಲಸ – ಉದ್ಯಮಶೀಲತೆ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ. ಈ ಮೂರು ದಾರಿಗಳಲ್ಲಿ ಯಾವುದನ್ನೇ ಆಯ್ಕೆ ಮಾಡಿಕೊಂಡರೂ ಪ್ರಾಮಾಣಿಕತೆ, ಶ್ರಮ ಮತ್ತು ನೈತಿಕತೆಯನ್ನು ಜೀವನದ ಮೂಲಮಂತ್ರವನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಕುಸುಮ ಅಜಯ್ ಅವರು ಸೇವಾ ವರದಿ ವಾಚನ ಮಾಡಿದರು. ಉಪಾಧ್ಯಕ್ಷ ಮಂಜಪ್ಪ ಜಿ. ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಟ್ರಸ್ಟಿಗಳಾದ ಎಂ.ಆರ್. ಪೂರ್ಣೇಶ್ ಅವರು ಪ್ರತಿಷ್ಠಾನಕ್ಕೆ ಸೇರ್ಪಡೆಯಾದ ವಿಶೇಷ ಆಹ್ವಾನಿತರ ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಯ ವಿಭಾಗೀಯ ಸಂಚಾಲಕರಾದ ಪುರಷೋತ್ತಮ ಓ.ಎಲ್., ತುಮಕೂರು ಜಿಲ್ಲಾ ಮುಖ್ಯ ಸಂಚಾಲಕರಾದ ಜೆ.ಪಿ. ಶಿವಣ್ಣ, ಮಂಡ್ಯ ಜಿಲ್ಲಾ ಮುಖ್ಯ ಸಂಚಾಲಕರಾದ ವಸಂತ ಕುಮಾರ್ ಎನ್.ಎಸ್., ಹಾಸನ ಜಿಲ್ಲಾ ಮುಖ್ಯ ಸಂಚಾಲಕರಾದ ರಾಮಾಂಜನೇಯ, ಪ್ರಸಾದ್ ಬಾಬು, ಮಂಜುನಾಥ್ ಎ., ಕೆ.ಪಿ. ಲಕ್ಷ್ಮೀ ರಾಜಪ್ಪ, ಅಶೋಕ್, ತುಮಕೂರು ಹಾಗೂ ಬೆಂಗಳೂರು ವಸತಿ ನಿಲಯಗಳ ವಾರ್ಡನ್‌ಗಳು, ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲೆಗಳ ಸಂಚಾಲಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ತುಮಕೂರು ಈಡಿಗ ಹಾಸ್ಟೆಲ್‌ನ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ಆರ್ಯ ಈಡಿಗ ವಸತಿ ನಿಲಯದ ವಿದ್ಯಾರ್ಥಿನಿಯರು ಜ್ಯೋತಿ ಬೆಳಗಿಸುವ ಗೀತೆಯನ್ನು ಹಾಡಿದರು. ಬೆಂಗಳೂರು ವಿಭಾಗೀಯ ಸಂಚಾಲಕರಾದ ಹನುಮಂತಪ್ಪ ಎಂ.ಇ. ಅವರು ಸ್ವಾಗತಿಸಿದರು. ಕು. ಕಾಶಿಬಾಯಿ ಸಿ. ಗುತ್ತೇದಾರ ಅವರು ನಿರೂಪಿಸಿದರು. ತುಮಕೂರು ಜಿಲ್ಲೆಯ ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕಾ ಯು. ಅವರು ವಂದಿಸಿದರು.
“ಶಿಕ್ಷಣದಿಂದ ಪ್ರಗತಿ – ಸೇವೆಯಿಂದ ಸಮಾಜದ ಬೆಳವಣಿಗೆ” ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ವರದಿ -ಕಾಶಿಬಾಯಿ ಸಿ. ಗುತ್ತೇದಾರ. ಜೆಪಿಎನ್ಪಿ ಕಚೇರಿ ಸಂಯೋಜಕಿ.

