ಲಾಡ್ಲಾಪೂರ ರಸ್ತೆಯಲ್ಲಿ ಸುಟ್ಟ ಕರಕಲಾದ ಮಹಿಳೆಯ ಶವ ಪತ್ತೆ, ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಲಾಡ್ಲಾಪೂರ ಗ್ರಾಮದ ಸಮೀಪದ ರಸ್ತೆಯ ಬದಿಯಲ್ಲಿ ಸುಟ್ಟು ಕರಕಲಾದ ಅಂದಾಜು 30 ವರ್ಷ ವಯಸ್ಸಿನ ಮಹಿಳೆಯ ಶವ ಭಾನುವಾರ ಸಾಯಂಕಾಲ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ವಾಡಿ ಪಿಎಸ್ಐ ತಿರುಮಲೇಶ್ ಕೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪರಿಚಿತ ಮಹಿಳೆಯ ಶವ ಬೇರೆ ಕಡೆ ಕೊಲೆ ಮಾಡಿ ಶವವನ್ನು ಇಲ್ಲಿಗೆ ತಂದು ಸುಟ್ಟು ಹಾಕಿದ್ದಾರೆ, ಈ ಪ್ರಕರಣದ ಹಿನ್ನೆಲೆ ಹಾಗೂ ವಾರಸುದಾರರ ಪತ್ತೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಸಿಪಿಐ ಚಂದ್ರಶೇಖರ ತಿಗಡಿ ತಿಳಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭಯಾನಕ ಕೃತ್ಯ ಲಾಡ್ಲಾಪೂರ ಗ್ರಾಮಸ್ಥರಿಗೂ ಸೇರಿದಂತೆ ಸುತ್ತಲಿನ ನಾಗರಿಕರೆಲ್ಲರಿಗೂ ಆತಂಕವನ್ನುಂಟು ಮಾಡಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮಹಿಳೆಯ ಸುಟ್ಟ ಶವ ಪತ್ತೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ ಇದರ ಹಿನ್ನೆಲೆ ಪೊಲೀಸರ ತನಿಖೆಯಿಂದ ಹೊರಬರಲಿದೆ ಅಲ್ಲಿವರೆಗೆ ಕಾದುನೋಡಬೇಕಿದೆ.

