Oplus_0

ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಭಗ್ನಗೊಳಿಸಿ ಅವಮಾನಿಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೀವಣಗಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ ವಿಶ್ವಾರಾಧ್ಯ ಪಾಟೀಲ್, ಮುತ್ತಗಾ ಗ್ರಾಮದ ಸಾಬಣ್ಣ ಮಲ್ಲಪ್ಪ ಪಟ್ಟೇದಾರ ಹಾಗೂ ಶಿವರಾಜ್ ಶಂಕರ ನಾಟೀಕಾರ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಅ.10 ರಂದು ಬೆಳಗಿನ ಜಾವ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿ, ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಅಪರ ಪೊಲೀಸ್‌ ಅಧೀಕ್ಷಕ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪಿಐ ನಟರಾಜ್ ಲಾಡೆ, ಸಿಪಿಐ ಚಂದ್ರಶೇಖರ್ ತಿಗಡಿ, ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತೀವ್ರ ತನಿಖೆ ನಡೆಸಿದ ಬಳಿಕ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಶ್ವಾನ ದಳ ಸಹಾಯ ಪಡೆದುಕೊಂಡು ಆರೋಪಿಗಳನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಂಧಿತ ಆರೋಪಿಗಳಲ್ಲಿ ಇಬ್ಬರು ಕೋಲಿ ಸಮುದಾಯಕ್ಕೆ ಸೇರಿದ್ದವರಾಗಿದ್ದು, ಇವರು ಮೂರ್ತಿ ವಿರೂಪ ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಅಭಿವೃದ್ಧಿ ಆಗುತ್ತದೆ ಎಂದು ಕಾರಣ ಇಟ್ಟುಕೊಂಡು ಮೂರ್ತಿಗೆ ಅಪಮಾನ ಮಾಡಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ನಟರಾಜ್ ಲಾಡೆ, ಚಂದ್ರಶೇಖ‌ರ್ ತಿಗಡಿ, ಜಗದೇವಪ್ಪ ಪಾಳಾ, ಪಿಎಸ್ಐಗಳಾದ ಚಂದ್ರಕಾಂತ ಮೆಕಾಲೆ, ತಿರುಮಲೇಶ್ ಕುಂಬಾರ, ಗೌತಮ್ ಗುತ್ತೇದಾರ, ತಿಮ್ಮಯ್ಯ ಕಾಳಗಿ ಸೇರಿದಂತೆ ಇತರರು ಇದ್ದರು.

ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿ ಅಪಮಾನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಲಿ ಸಮಾಜದ ವತಿಯಿಂದ ಎಲ್ಲೆಡೆ ಹೋರಾಟ ಪ್ರತಿಭಟನೆಗಳು ಜೋರಾಗಿ ನಡೆದಿದ್ದವು. ಹೀಗಾಗಿ ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ತೀವ್ರ ಗತಿಯಲ್ಲಿ ತನಿಖೆ ಕಾರ್ಯ ಕೈಗೊಂಡು ಕೊನೆಗೂ ಒಂದೇ ವಾರದಲ್ಲಿ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!