Oplus_0

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಮನವಿ | ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ, ಜಾತ್ರೆ ಮಹೋತ್ಸವ ಯಶಸ್ವಿಗೆ ತಾಲೂಕು ಆಡಳಿತದ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಕ್ಟೋಬರ್ 7 ರಂದು ಜರುಗುವ ನಾಗಾವಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪುರಸಭೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ದೇವಸ್ಥಾನದ ಖಾತೆಯಲ್ಲಿರುವ 2 ಕೋಟಿ ಹಣದಲ್ಲಿ ಯಾತ್ರಿಕ ನಿವಾಸ, ಅಡುಗೆ ಕೋಣೆಗಳು ಮತ್ತು ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಜಾತ್ರೆ ಮುಗಿದ ನಂತರ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಮಾಹಿತಿ ನೀಡಿದರು.

ಭಕ್ತರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪ್ರವಾಸೋದ್ಯಮ ಇಲಾಖೆಯ ಯಾತ್ರಿಕ ನಿವಾಸ ಮತ್ತು ಅಂಬಿಗರ ಚೌಡಯ್ಯ ಭವನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆಸುಪಾಸು ಮತ್ತು ಅಂಗಡಿಗಳಲ್ಲಿ ಮದ್ಯ ಮಾರಾಟ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಸಿಸಿಟಿವಿ ಅಳವಡಿಸಲು ಮತ್ತು ಜೆಸ್ಕಾಂನವರು ವಿದ್ಯುತ್ ಹೊರೆ ತಪ್ಪಿಸಲು ಹೆಚ್ಚಿನ ಟಿ.ಸಿ. ಅಳವಡಿಸಲು ಸೂಚಿಸಿದರು. ದೀಪಾಲಂಕಾರ ಸಮಿತಿಯು ಸರ್ಕಾರದ ಯಾವುದೇ ಹಣ ಪಡೆಯದೇ ಜಾತ್ರೆಗೆ ವಿಶೇಷ ಮೆರಗು ನೀಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು.

ಸಾರಿಗೆ ನಿಗಮದ ಎಂಡಿ ಅವರಿಗೆ ಮನವಿ ಸಲ್ಲಿಸಿ ಜಾತ್ರಾ ವಿಶೇಷ ಬಸ್ ಬಿಡಲು ಕೋರಲಾಗುವುದು. ಜಾತ್ರೆಗೆ ಕಳೆದ ವರ್ಷ 3.77 ಲಕ್ಷ ರೂ. ಖರ್ಚಾಗಿದ್ದರೆ, ಈ ಬಾರಿ 4.5 ಲಕ್ಷ ರೂ. ವೆಚ್ಚವಾಗಿದೆ. ಕಳೆದ ತಿಂಗಳು ಹುಂಡಿ ಒಡೆದಾಗ 13 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಧರ್ಮದರ್ಶಿ ರತ್ನಾಕರ್ ನಾಯಕ ಸರಾಫ್ ಮಾತನಾಡಿ, ಪಲ್ಲಕ್ಕಿ ಸಮೀಪ ಹೆಚ್ಚು ಜನರು ಬರುವುದರಿಂದ ತೊಂದರೆ ಆಗುತ್ತದೆ ಹೀಗಾಗಿ ಪಲ್ಲಕ್ಕಿ ಸುತ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಹೇಳಿದರು. ಉತ್ಸವ ಯಶಸ್ವಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಆಗದಂತೆ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ನೂಕುನುಗ್ಗಲು ತಪ್ಪಿಸಲು ಪಲ್ಲಕ್ಕಿ ಮಂದಿರದ ಆವರಣದಲ್ಲಿರುವಾಗ ಜನರನ್ನು ಹೊರಗೆ ಕಳುಹಿಸಲಾಗುವುದು. ತಾಲೂಕು ಆಡಳಿತದವರು ಶಾಶ್ವತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಈ ಭಾಗದ ಐತಿಹಾಸಿಕ ನಾಗಾವಿ ಯಲ್ಲಮ್ಮ ಶಕ್ತಿ ದೇವತೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಅಧಿಕಾರಿಗಳ ಜತೆ ಭಕ್ತರು ಕೈ ಜೋಡಿಸಿ ಮಾದರಿ ಜಾತ್ರೆ ಮಾಡೋಣ ಎಂದು ಹೇಳಿದರು.

ಪುರಸಭೆ ಸದಸ್ಯ ನಾಗರಾಜ ಭಂಕಲಗಿ ಮಾತನಾಡಿ, ದೇವಸ್ಥಾನದ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಕಳೆದ ವರ್ಷ ಭಕ್ತರ ಪಾಕೆಟ್ ಮತ್ತು ಚಿನ್ನ ಕಳವು ಆಗಿವೆ. ಪಾದಚಾರಿಗಳಿಗೆ ಓಡಾಡಲು ಜಾಗ ಬಿಟ್ಟು, ವ್ಯಾಪಾರಿಗಳಿಗೆ ಬೇರೆ ವ್ಯವಸ್ಥೆ ಮಾಡಿ ಎಂದರು.

ಅಂಬರೀಷ್ ಸುಲೇಗಾಂವ ಮಾತನಾಡಿ, ಶೌಚಾಲಯ ಮತ್ತು ಸ್ನಾನಗೃಹ ಬಹಳ ಸೂಕ್ಷ್ಮ ವಿಚಾರ. ಸಾಕಷ್ಟು ದುಡ್ಡಿದ್ದರೂ ಇಲಾಖೆ ಮಾಡುತ್ತಿಲ್ಲ. ಒಂದು ವೇಳೆ ಅವರು ಮಾಡದಿದ್ದರೆ ನಾವು ಜನರು ಸೇರಿ ಮಾಡುತ್ತೇವೆ ಎಂದರು.

ದುರ್ಗಾವಾಹಿನಿ ಮಾತೆಯರು ದೇವಸ್ಥಾನದ ಪರಿಸರದಲ್ಲಿ ಸ್ನಾನ ಮತ್ತು ಶೌಚಾಲಯ ವ್ಯವಸ್ಥೆ ಮಾಡಲು ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಗಣ್ಯರಾದ ನಾಗರೆಡ್ಡಿ ಗೋಪಸೆನ್, ರಾಜೇಶ್ ಕಾಶಿ, ವಿಠಲ್ ಗಾಯಕವಾಡ, ಪ್ರಲ್ಹಾದ ವಿಶ್ವಕರ್ಮ, ಭೀಮಣ್ಣ ಕರದಾಳ, ಲಕ್ಷ್ಮಣ ತಾಂಡೂರಕರ್, ಭೀಮಾಶಂಕರ ಹೋಳಿಕಟ್ಟಿ, ಮತ್ತು ಶ್ರೀನಿವಾಸ್ ಹಳ್ಳಿ ಸೇರಿದಂತೆ ಹಲವರು ತಮ್ಮ ಸಲಹೆಗಳನ್ನು ನೀಡಿದರು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಅಗ್ನಿಶಾಮಕ ದಳದ ದಿಲೀಪ ಗುಪ್ತಾ, , ಜೆಸ್ಕಾಂ ಎಇಇ, ತಾಲೂಕು ವೈದ್ಯಾಧಿಕಾರಿ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಕಾಳಗಿ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಪುರಸಭೆ ಸದಸ್ಯರಾದ ರಸೂಲ್ ಮುಸ್ತಫಾ, ಪ್ರಭು ಗಂಗಾಣಿ, ಗೌತಮ ನಾಯಕ, ಈರಣ್ಣ ಚೌದ್ರಿ, ಈರಪ್ಪ ಭೋವಿ, ಸುರೇಶ ಅಳ್ಳೋಳ್ಳಿ, ಆನಂದ ಗುತ್ತೇದಾರ, ಬಸ್ಸಣ್ಣ ತಳವಾರ, ಮಲ್ಲಿಕಾರ್ಜುನ ಪೂಜಾರಿ, ಸಾಬಣ್ಣ ಪೂಜಾರಿ, ಮಹಾದೇವ ಅಂಗಡಿ, ನರಹರಿ ಕುಲಕರ್ಣಿ, ರಾಮಲಿಂಗ ಬಾನರ್, ಶಂಭುಲಿಂಗಪ್ಪ ಎದುರುಮನಿ, ಆಕಾಶ ಬೆನಕನಳ್ಳಿ ಸೇರಿದಂತೆ ನೂರಾರು ಭಕ್ತರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!