ಒಳ ಮೀಸಲು ಮುಂದೂಡಲು ಸರ್ಕಾರದಲ್ಲಿರುವ 3 ಸಚಿವರ ಹುನ್ನಾರ | ಆ. 19 ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳ ಮೀಸಲಾತಿ ಘೋಷಿಸಲು: ದೇವಿಂದ್ರನಾಥ್ ನಾದ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ನ್ಯಾ ನಾಗಮೋಹನ್ ದಾಸ್ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆಗಸ್ಟ್ 19ಕ್ಕೆ ಮುಂದೆ ಹಾಕಿರುವುದು ಒಳ ಮೀಸಲಾತಿ ವಿರೋಧಿಗಳಿಗೆ ಸರ್ಕಾರದ ಮೇಲೆ ದಬಾವಣೆ ಮಾಡಲು ಸಮಯಾವಾಕಾಶ ಕೊಟ್ಟಂತಾಗಿದೆ ಇದು ಸರ್ಕಾರದಲ್ಲಿರುವ ವಿರೋಧಿಗಳ ಕುತಂತ್ರವಾಗಿದ್ದು, ಇದರಿಂದ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಲು ಹವಣಿಸುವ ಹುನ್ನಾರ ನಡೆದಿದೆ ಎಂದು ಕರ್ನಾಟಕ ಮಾದಿಗ ಜಾತಿ-ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡ ದೇವಿಂದ್ರನಾಥ್ ನಾದ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು , ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸುವುದು ಮಾದಿಗ ಸಮಾಜದ ಕಾರ್ಯಕಲಾಪದಲ್ಲಿ ಒಂದೇ ಸಮುದಾಯದ ಅಧಿಕಾರಿಗಳೇ ಕಾರ್ಯನಿರ್ವಹಿಸಿದ್ದಾರೆ. ಈಗ ಅದೇ ಜನ ವರದಿಯ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರದ ಹಿಂದೆ ಸಕ್ರಿಯರಾಗಿದ್ದಾರೆ. ಇದು ಒಳ ಮೀಸಲಾತಿ ಕುರಿತಾದ ಕಾಂಗ್ರೆಸ್ಸಿನ ವಿಳಂಬ ನೀತಿ, ನಿಧಾನ ದ್ರೋಹದ ಮುಂದುವರಿದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಲ್ಲಿ ಆದಿ ಕರ್ನಾಟಕ (ಜನಸಂಖ್ಯೆ: 1.47,199), ಆದಿ ದ್ರಾವಿಡ (ಜನಸಂಖ್ಯೆ: 3,20,641), ಆದಿ ಆಂಧ್ರ (ಜನಸಂಖ್ಯೆ: 7,114) – ಇದನ್ನು ‘ಇ’ ಪ್ರವರ್ಗದಲ್ಲಿ ಗುರುತಿಸಲಾಗಿದೆ. ಈಗ ‘ಅ’ ಗುಂಪಿಗೆ ಇಡಿಯಾಗಿ ‘ಇ’ ಗುಂಪಿಗೆ ಸೇರಿಸುವ ಹುನ್ನಾರ ನೆಡದಿದೆ. ‘ಇ’ ಗುಂಪಿನಲ್ಲಿ ಮೂಲ ಜಾತಿ ಹೇಳದೆ ಆದಿ ದ್ರಾವಿಡ ಎಂದು ಗುರುತಿಸಿಕೊಂಡವರು 3,20,641 ಜನ ಇದ್ದಾರೆ. ಇವರಲ್ಲಿ ಬಹುತೇಕ ಜನ ಪೌರಕಾರ್ಮಿಕ ವೃತ್ತಿಯಲ್ಲಿ ಇದ್ದು. ಮಾದಿಗ ಸಂಬಂಧಿತ ಜಾತಿಗಳವರಾಗಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದ್ದಾರೆ.

ಸರ್ಕಾರದ ವಿಳಂಬ ನೀತಿಯ ಸಮಾಯಾವಕಾಶ ಬಳಸಿಕೊಂಡು ನಮ್ಮ ಸೋದರ ಗುಂಪಿನವರು ಬಲಾಬಲಾ ಪ್ರದರ್ಶನಕ್ಕೆ ಇಳಿದಿರುವು ಒಳ್ಳೆಯ ಬೆಳವಣಿಗೆಯಲ್ಲ, ಸರ್ಕಾರದಲ್ಲಿ ಪ್ರಭಾವಿ ಸಚಿವರೂ ತಮ್ಮವರೇ ಇದ್ದರೂ ಅನಗತ್ಯವಾಗಿ ಬೀದಿಗಿಳಿದು ದ್ವೇಷ ಭಾಷಣ ಮಾಡುವುದು ಪರಸ್ಪರ ಅಂತರ ಹೆಚ್ಚು ಮಾಡುತ್ತದೆ. ಈ ಬೆಳವಣಿಗೆಗಳ ಹಿಂದೆ ಇದ್ದಾರೆಂಬ ಮಾಹಿತಿಗಳು ಬಂದಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.

ಸಿದ್ಧರಾಮಯ್ಯನವರು 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ವಿಳಂಬ ದ್ರೋಹದ ತಂತ್ರ ಅನುಸರಿಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ನಮ್ಮ ನೇರ ಆರೋಪವೆಂದರೆ ಸಿದ್ದರಾಮಯ್ಯನವರು ‘ಮೂರು’ ಸಚಿವರ ಕೈಗೊಂಬೆಯಾಗಿದ್ದಾರೆ ಎಂಬುದು. ಸಿದ್ದರಾಮಯ್ಯನವರು ಸ್ವತಂತ್ರವಾಗಿ ಒಂದು ಸಚಿವ ಸಂಪುಟ ಸಭೆ ನೆಡೆಸುವಷ್ಟೂ ಧೈರ್ಯ, ಹಿಡಿತ ಉಳಿಸಿಕೊಂಡಿಲ್ಲ.

ಆಗಸ್ಟ್ 1ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ವರ್ಷ ಕಳೆಯಿತು. ಒಳಮೀಸಲಾತಿ ವಿಷಯದಲ್ಲಿ ಒಂದು ಹೆಜ್ಜೆಯೂ ಮುಂದೆ ಇಟ್ಟಿಲ್ಲ. ಯಾರದೋ ಅಣತಿಗೆ ತಕ್ಕಂತೆ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ ನ್ಯಾ ನಾಗಮೋಹನ್ ದಾಸ್ ವರದಿಗೂ, ನ್ಯಾ. ಕಾಂತರಾಜ್ ವರದಿಗೆ ಆದ ಗತಿಯೇ ಆಗುತ್ತದೆ ಎಂಬ ಅನುಮಾನ ಮಾದಿಗ ಸಮಾಜಕ್ಕೆ ಮೂಡಿದೆ.

ಸಚಿವ ಸಂಪುಟ ಸಭೆಯನ್ನು ಮುಂದೆ ಹಾಕಿ, ಎಲ್ಲ ಜಾತಿ, ಉಪಜಾತಿಗಳವರನ್ನು ಬೀದಿಗೆ ಇಳಿಸಿ ಗೊಂದಲ ಹುಟ್ಟುಹಾಕಲು ಸಂಪುಟದ ಸದಸ್ಯರೇ ಮುಂದಾಗಿದ್ದರೂ ಸಿದ್ದರಾಮಯ್ಯನವರೂ ಏನೂ ಮಾಡುತ್ತಿಲ್ಲ. ನಮ್ಮದು ಚಿತ್ರದುರ್ಗ ಡಿಕ್ಲರೇಶನ್ ಎಂದು ಕೊಚ್ಚಿಕೊಂಡಿದ್ದು ಸಿದ್ದರಾಮಯ್ಯನವರು. ಮೊದಲ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿಯ ನಿರ್ಣಯ ಘೋಷಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. 2 ವರ್ಷ 3 ತಿಂಗಳಾಯಿತು. ಈಗ ಪರಿಸ್ಥಿತಿ ಎಷ್ಟು ಬಿಗಾಡಿಯಿಸಿದೆ ಎಂದರೆ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ನೆಡೆಸಲೂ ಸಾಧ್ಯವಾಗುತ್ತಿಲ್ಲ.

ಸಿದ್ದರಾಮಯ್ಯ ಕಾಂತರಾಜ್ ಆಯೋಗದ ಹೆಸರಲ್ಲಿ 165 ಕೋಟಿ ಮುಳುಗಿಸಿದರು. ಈಗ ನಾಗಮೋಹನ್ ದಾಸ್ ವರದಿಯನ್ನು ತಮ್ಮ ಮೂಗಿನ ನೇರಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಹುನ್ನಾರ ನೆಡೆದಿದೆ.

ಇದೆಲ್ಲವನ್ನು ಅಧ್ಯಯನ ಮಾಡಿಯೇ ಮಾಧುಸ್ವಾಮಿ ಸಮಿತಿ ಬಲ ಗುಂಪಿಗೆ 5.5%, ಬೋವಿ, ಬಂಜಾರ ಗುಂಪಿಗೆ 4.5% ಮೀಸಲಾತಿ ನಿಗದಿಪಡಿಸಲಾಗಿತ್ತು. ಬಿಗುಮಾನ ಬಿಟ್ಟು ರಾಜ್ಯ ಸರ್ಕಾರ ಮಾಧುಸ್ವಾಮಿ ವರದಿಯನ್ನೇ ಜಾರಿ ಮಾಡುವುದು ಒಳ್ಳೆಯದು. ಇಲ್ಲವಾದರೆ ಎಲ್ಲ ಆಯೋಗಗಳು ಹೇಳುವಂತೆ. ಮಾದಿಗರಿಗೆ 6% ಪ್ರತ್ಯೇಕ ಮೀಸಲಾತಿ ಕೊಟ್ಟು ಉಳಿದಿದ್ದನ್ನು ನಿಧಾನಗತಿಯಲ್ಲಿ ಮಾಡಬಹುದಾಗಿದೆ.

ಒಳಮೀಸಲಾತಿ ಜಾರಿ ಆಗುವವರೆಗೆ ಉದ್ಯೋಗ ಅವಕಾಶಗಳು ಬಂದ್ ಆಗಿರುವುದರಿಂದ ಎಸ್ಸಿ ಅಲ್ಲದ ಸಮಾಜಗಳೂ ಸಿದ್ಧರಾಮಯ್ಯನ ವಿಳಂಬ ಧೋರಣೆಯ ಬಗ್ಗೆ ರೋಸಿ ಹೋಗಿದ್ದಾರೆ. ಉದ್ಯೋಗ ಅವಕಾಶಗಳನ್ನು ನಿಲ್ಲಿಸಿ, ಎಲ್ಲ ಮೂರು ಗುಂಪಿನ ದಲಿತರನ್ನು ಬೀದಿಗೆ ಬರುವಂತೆ ಮಾಡಿರುವುದು ಸಿದ್ದರಾಮಯ್ಯನವರ ಸಾಧನೆಯಾಗಿದೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ನವರು ಈ ಕಾಲಾಹರಣದ ನೀತಿಯನ್ನು ಪಕ್ಕಕ್ಕೆ ಇಟ್ಟು ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು. ಆಗಸ್ಟ್ 19 ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳ ಮೀಸಲಾತಿ ಘೋಷಿಸಬೇಕು. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ನಾಳೆ ರಾಜ್ಯದೆಲ್ಲೆಡೆ ತಮಟೆ ಚಳವಳಿ ನೆಡೆಯಲಿದೆ. ಇಷ್ಟಾಗಿಯೂ ಆ.19 ರ ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!