ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಆರ್.ಎಸ್.ಎಸ್ ನಿಷೇಧ ಮಾಡುವಂತೆ ಸಿದ್ದು ಪೂಜಾರಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ವಿರುದ್ಧ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ ಮನುವಾದಿ ಮನೋಸ್ಥಿತಿಯ ಆರ್.ಎಸ್.ಎಸ್ ನಿಷೇಧ ಮಾಡಬೇಕು ಎಂದು ಕುರುಬ ಸಮಾಜದ ತಾಲೂಕು ಉಪಾಧ್ಯಕ್ಷ ಸಿದ್ದು ಪೂಜಾರಿ ವಾಡಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರು ಬುದ್ಧ, ಬಸವ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು, ಜಾತಿ-ವರ್ಗ ರಹಿತ ಮತ್ತು ಶೋಷಣೆಯಿಲ್ಲದ ಸಮಾಜ ನಿರ್ಮಾಣದ ಹಾದಿಯಲ್ಲಿ ನಡೆಯುತ್ತಿರುವ ಪ್ರಗತಿಪರ ನಾಯಕರು. ಅವರ ವಿರುದ್ಧ ನಡೆಯುತ್ತಿರುವ ಜೀವ ಬೆದರಿಕೆ, ನಿಂದನೆ ಮತ್ತು ಸುಳ್ಳು ಪ್ರಚಾರಗಳು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ನೇರ ದಾಳಿಯಾಗಿದೆ ಎಂದು ಖಂಡಿಸಿದ್ದಾರೆ.
ಆರ್ಎಸ್ಎಸ್ ಅವರು ತಮ್ಮ ಶತಮಾನೋತ್ಸವದ ಅಂಗವಾಗಿ ಶಾಲೆ-ಕಾಲೇಜುಗಳಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಆದರೆ ಇದರ ವಿರುದ್ಧ ಕೆಲ ಮನುವಾದಿಗಳು ಸುಳ್ಳು ಪ್ರಚಾರ ನಡೆಸಿ, ಜೀವಬೇದರಿಕೆ ನೀಡಿರುವುದು ಅಸಹ್ಯಕರ ಹಾಗೂ ಕಾನೂನು ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.

