Oplus_0

ಕಲ್ಯಾಣ ಕರ್ನಾಟಕಕ್ಕೆ ಶುದ್ಧವಾದ ಕುಡಿಯುವ ನೀರು ಕೊಡಲಾಗದ ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿ ಅಲ್ಲ ಪ್ರಚಾರ ಮಂತ್ರಿ: ನಾರಾಯಣಸ್ವಾಮಿ ವ್ಯಂಗ್ಯ 

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಕಲ್ಯಾಣ ಕರ್ನಾಟಕಕ್ಕೆ ಶುದ್ಧವಾದ ಕುಡಿಯುವ ನೀರು ಕೊಡಲಾಗದ ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿ ಅಲ್ಲ ಪ್ರಚಾರ ಮಂತ್ರಿ ಆಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲ್ಯಾಣ ಕರ್ನಾಟಕ ಭಾಗದ ಜನರು ಇಂದು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕಾಗಿ ಪರದಾಡುತ್ತಿರುವುದು ಅತ್ಯಂತ ದುಃಖಕರ ಮತ್ತು ಆತಂಕಕಾರಿ ಸಂಗತಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆಯವರು ಅಭಿವೃದ್ಧಿಯ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ “ಫ್ಯಾಕ್ಟ್ ಚೆಕ್” ರಾಜಕಾರಣದಲ್ಲಿ ತೊಡಗಿಸಿಕೊಂಡಿರುವಾಗ, ಅವರದೇ ಇಲಾಖೆಯ ಅಂಕಿಅಂಶಗಳು ಆಡಳಿತದ ಭೀಕರ ವೈಫಲ್ಯವನ್ನು ಬಹಿರಂಗಪಡಿಸುತ್ತಿವೆ.

ಒಬ್ಬ ಸಚಿವರ ಕರ್ತವ್ಯವೆಂದರೆ ಕೇವಲ ಸಿದ್ಧಾಂತಗಳ ಮೇಲೆ ಭಾಷಣ ಮಾಡುವುದಲ್ಲ, ಬದಲಾಗಿ ಸಾಮಾನ್ಯ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಭಾಗದವರೇ ಆದ ಸಚಿವರು ತಮ್ಮ ಸ್ವಂತ ಜಿಲ್ಲೆ ಮತ್ತು ಇಲಾಖೆಯ ವ್ಯಾಪ್ತಿಯಲ್ಲೇ ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯ ಒದಗಿಸುವಲ್ಲೂ ವಿಫಲರಾಗಿರುವುದು ಸದನದಲ್ಲಿ ನೀಡಿರುವ ಅಧಿಕೃತ ಅಂಕಿಅಂಶಗಳಿಂದಲೇ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಅಂಕಿಅಂಶಗಳ ಕನ್ನಡಿ: ವೈಫಲ್ಯದ ಪರಾಕಾಷ್ಠೆ!

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು 3965 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಗ್ರಾಮ ಪಂಚಾಯತ್ ಸುಪರ್ದಿಯಲ್ಲಿರುವ 2987 ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 1708 ಮಾತ್ರ. ಅಂದರೆ ಶೇ.43 ರಷ್ಟು ಘಟಕಗಳು ಇಂದು ಸ್ಥಗಿತಗೊಂಡು ಧೂಳು ಹಿಡಿಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಘಟಕಗಳ ನಿರ್ವಹಣೆ ಮತ್ತು ದುರಸ್ತಿ ಹೆಸರಿನಲ್ಲಿ ₹17 ಕೋಟಿಗೂ ಅಧಿಕ ಹಣ ಖರ್ಚಾಗಿದೆ.

ಈ ₹17 ಕೋಟಿ ಹಣ ಯಾರ ಜೇಬಿಗೆ ಸೇರಿದೆ ಇಷ್ಟೊಂದು ಹಣ ಖರ್ಚಾದರೂ 1279 ಘಟಕಗಳು ಏಕೆ ಸ್ಥಗಿತಗೊಂಡಿವೆ? ದುರಸ್ತಿಗೆ ಆದೇಶ ನೀಡಲು ಪುರುಸೊತ್ತಿಲ್ಲವೇ? ಸರ್ಕಾರದ ಖಜಾನೆ ಖಾಲಿಯಾಗಿದೆಯೇ ಅಥವಾ ನಿಮ್ಮ ‘ಫ್ಯಾಕ್ಟ್ ಚೆಕ್’ ಅಭಿವೃದ್ಧಿಯ ಕಡೆಗೆ ತಿರುಗುತ್ತಿಲ್ಲವೇ, ಒಂದು ಕಡೆ ಸರ್ಕಾರ ಅಭಿವೃದ್ಧಿ ಎಂಬ ಬಣ್ಣದ ಜಾಹೀರಾತುಗಳನ್ನು ನೀಡುತ್ತಿದೆ, ಇನ್ನೊಂದು ಕಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಇದು ಅಭಿವೃದ್ಧಿಯೇ? ಅಥವಾ ಜನರ ದುರಂತದ ಮೇಲೆ ನಡೆಯುತ್ತಿರುವ ಪ್ರಚಾರ ರಾಜಕಾರಣವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸ್ವಂತ ಜಿಲ್ಲೆಯಲ್ಲೇ ಕತ್ತಲೆ: ಕಲಬುರಗಿಯ ದುಸ್ಥಿತಿ!

ಸಚಿವರ ಉಸ್ತುವಾರಿ ಜಿಲ್ಲೆಯಾದ ಕಲಬುರಗಿಯಲ್ಲೇ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅಲ್ಲಿರುವ 510 ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 132 ಮಾತ್ರ. ಅಂದರೆ ಶೇ.75 ರಷ್ಟು ಘಟಕಗಳು ಸ್ಥಗಿತಗೊಂಡು ಕೆಟ್ಟು ನಿಂತಿವೆ. ಸಚಿವರ ಮೂಗಿನ ನೇರಕ್ಕೇ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸ್ವಂತ ಜಿಲ್ಲೆಯಲ್ಲೇ ಶೇ.75 ರಷ್ಟು ವೈಫಲ್ಯವಿಟ್ಟುಕೊಂಡು ರಾಜ್ಯದ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವುದು ರಾಜಕೀಯ ದುರಹಂಕಾರದ ಪರಮಾವಧಿಯಾಗಿದೆ ಎಂದು ಟೀಕಿಸಿದ್ದಾರೆ.

ಪ್ರಚಾರದ ಮೋಹ – ಕರ್ತವ್ಯದ ದ್ರೋಹ!

ಸಚಿವರ ಸಂಪೂರ್ಣ ಗಮನ ಆರ್’ಎಸ್ಎಸ್, ಬಿಜೆಪಿ ನಾಯಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ‘ಫ್ಯಾಕ್ಟ್ ಚೆಕ್’ ಮಾಡುವುದರಲ್ಲೇ ಮುಳುಗಿದೆ. ಅವರು ಗ್ರಾಮೀಣಾಭಿವೃದ್ಧಿ ಸಚಿವರಿಗಿಂತ ಕಾಂಗ್ರೆಸ್ ಸರ್ಕಾರದ ‘ಪ್ರಚಾರ ಮಂತ್ರಿ’ಯಾಗಿ ಹೆಚ್ಚು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಬೇರೆಯವರ ತಟ್ಟೆಯಲ್ಲಿ ಏನಿದೆ ಎಂದು ಇಣುಕಿ ನೋಡುವ ಮುನ್ನ, ತಮ್ಮ ಇಲಾಖೆಯ ತಟ್ಟೆಯಲ್ಲಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಬೇಕು. ನಿಮ್ಮ ಇಲಾಖೆಯ ವೈಫಲ್ಯದ ಬಗ್ಗೆ ಯಾರು ‘ಫ್ಯಾಕ್ಟ್ ಚೆಕ್’ ಮಾಡಬೇಕು? ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಕಲಬುರಗಿಗೆ ಬರುವುದು ಜನರ ಸಮಸ್ಯೆ ಆಲಿಸಲಿಕ್ಕೋ ಅಥವಾ ಕೇವಲ ‘ಪಿಕ್ನಿಕ್ ರಾಜಕಾರಣ’ ಮಾಡಲಿಕ್ಕೋ? ನಿಮ್ಮದೇ ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಲಾಗದ ನೀವು, ಇಡೀ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

“ಗರ್ವಂ ಸರ್ವನಾಶಾಯ” ಎಂಬಂತೆ ಅಹಂಕಾರ ಮತ್ತು ದರ್ಪ ಮನುಷ್ಯನ ಪತನಕ್ಕೆ ಕಾರಣವಾಗುತ್ತದೆ. ಆರ್’ಎಸ್ಎಸ್ ಮತ್ತು ವಿರೋಧ ಪಕ್ಷದವರನ್ನು ಟೀಕಿಸಲು ಬಳಸುವ ನಿಮ್ಮ ಸಮಯದ ಅರ್ಧದಷ್ಟನ್ನಾದರೂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಳಸಿದ್ದರೆ, ಇಂದು ಕಲ್ಯಾಣ ಕರ್ನಾಟಕದ ಜನ ಹನಿ ನೀರಿಗಾಗಿ ಬೀದಿಗಿಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕೊಟ್ಟ ಕೆಲಸವ ಬಿಟ್ಟು ಪರರ ನಿಂದನೆಯೊಳು, ಮಗ್ನನಾಗಿಹನು ನೋಡು ನಮ್ಮ ಸಚಿವ ಎಂಬ ಸಾಲುಗಳು ಸಚಿವರ ಕಾರ್ಯವೈಖರಿಗೆ ಜೀವಂತ ಉದಾಹರಣೆಯಾಗಿದೆ. ಜನರ ಪ್ರಶ್ನೆಗಳಿಗೆ ಉತ್ತರ ನೀಡಿ! ಸಚಿವರೇ, ರಾಜಕೀಯ ನಂತರವೂ ಮಾಡಬಹುದು. ಮೊದಲು ಜನರಿಗೆ ಕುಡಿಯಲು ಯೋಗ್ಯವಾದ ನೀರು ಕೊಡಿ. ನಿಮ್ಮ ವೈಫಲ್ಯಕ್ಕೆ ಕಲಬುರಗಿಯ ಜನರೇ ಸಾಕ್ಷಿಯಾಗಿದ್ದಾರೆ. ಇನ್ನಾದರೂ ‘ಪಿಕ್ನಿಕ್ ರಾಜಕಾರಣ’ ಬಿಟ್ಟು ಅಭಿವೃದ್ಧಿಯ ಕಡೆಗೆ ಮುಖ ಮಾಡಿ ಸಲಹೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗದವರೇ ಆದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಇಲಾಖೆಯ ಈ “ಅಭಿವೃದ್ಧಿ” ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಪ್ರಚಾರದ ಬೆಳಕಿನಲ್ಲಿ ಆಡಳಿತದ ವೈಫಲ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಜನರ ಸಮಸ್ಯೆಗಳಿಗೆ ಉತ್ತರ ಕೊಡಿ, ಅಂಕಿಅಂಶಗಳಿಗೆ ಉತ್ತರ ಕೊಡಿ, ನೀರಿಲ್ಲದೆ ನರಳುತ್ತಿರುವ ಕಲ್ಯಾಣ ಕರ್ನಾಟಕದ ಜನರಿಗೆ ಉತ್ತರ ಕೊಡಿ. ಒಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ‘ಪ್ರಚಾರ ಮಂತ್ರಿ’(Minister of Propaganda) ಆಗಿ ಕೆಲಸ ಮಾಡುತ್ತಿದ್ದೀರೆ ಹೊರತು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಅಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!