Oplus_0

ಗ್ರಾಮ ಮಟ್ಟದಲ್ಲಿ ಟಿಬಿ ನಿಯಂತ್ರಣಕ್ಕೆ ಪಿಡಿಓಗಳಿಗೆ ತರಬೇತಿ ಕಾರ್ಯಕ್ರಮ | ಕ್ಷಯರೋಗ ಸೋಂಕಿತರನ್ನು ದತ್ತು ಪಡೆದುಕೊಂಡು ಟಿಬಿ ಮುಕ್ತ ಗ್ರಾಮಕ್ಕೆ ಶ್ರಮಿಸಿ: ಡಾ.ವೀರನಾಥ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಗ್ರಾಮ ಮಟ್ಟದಲ್ಲಿ ಟಿಬಿ ಕ್ಷಯರೋಗ ಮುಕ್ತ ಗ್ರಾಮ ಮಾಡಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ, ಅಧ್ಯಕ್ಷರು, ಸದಸ್ಯರು, ಇತರ ದಾನಿಗಳು ಸೇರಿ ಕ್ಷಯರೋಗ ಹೊಂದಿದ ರೋಗಿಗಳನ್ನು ದತ್ತು ಪಡೆದುಕೊಂಡು, ಅವರಿಗೆ 6 ತಿಂಗಳ ವರೆಗೆ ಪೌಷ್ಟಿಕ ಆಹಾರ ಒದಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವೀರನಾಥ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯಾಭಿವೃದ್ದಿ ಮತ್ತು ಮೇಲ್ವಿಚಾರಣೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದರು.

ಕ್ಷಯರೋಗ ಹೊಂದಿರುವ ರೋಗಿಗೆ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ ಪ್ರತಿ ತಿಂಗಳು 1000 ರೂಪಾಯಿ ನೀಡಲಾಗುತ್ತಿದೆ. ಆದರೂ ರೋಗಿಯು ಸರಿಯಾದ ಪೌಷ್ಟಿಕ ಆಹಾರದ ಕ್ರಮ ಅನುಸರಿಸದ ಪರಿಣಾಮ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಗ್ರಾಮ ಮಟ್ಟದಲ್ಲೇ ಕ್ಷಯ ರೋಗಿಗಳನ್ನು ದತ್ತು ಪಡೆದುಕೊಂಡು, ಅವರಿಗೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡಿ, ಟಿಬಿ ಮುಕ್ತ ಗ್ರಾಮ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಟಿಬಿ ಮುಕ್ತ ಗ್ರಾಮ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.

ಆರಂಭದಲ್ಲಿ ಚಿತ್ತಾಪುರ ತಾಲೂಕಿನ ಭೀಮನಳ್ಳಿ, ಸನ್ನತಿ, ದಂಡೋತಿ, ಕಮರವಾಡಿ, ಕಡಬೂರು ಗ್ರಾಮಗಳಲ್ಲಿ ಟಿಬಿ ಮುಕ್ತ ಗ್ರಾಮ ಪಂಚಾಯಿತಿ ಘೋಷಣೆ ಮಾಡಬೇಕಾಗಿದೆ. ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಕ್ಷಯರೋಗ ತಡೆಗಟ್ಟುವ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಹೇಳಿದರು.

ಕ್ಷಯ ರೋಗ ಮುಕ್ತ ಗ್ರಾಮದ ಪ್ರಮುಖ ಅಂಶಗಳು :

ವಯಸ್ಕರಿಗೆ BCG ಲಸಿಕೆ: 16 ಜಿಲ್ಲೆಗಳಲ್ಲಿ ವಯಸ್ಕರಿಗೆ ಬಿಸಿಜಿ ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ, ಇದು ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕ್ಷಯ ರೋಗದ (TB) ಸಾಮಾನ್ಯ ನಿಯಂತ್ರಕ ಕ್ರಮಗಳಲ್ಲಿ ರೋಗಿಗಳಿಗೆ 6-12 ತಿಂಗಳ ಕಾಲ ನಿರಂತರ ಔಷಧಿ ನೀಡಿಕೆ (DOTS), ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳುವುದು, ಉತ್ತಮ ವಾತಾಯನ (Ventilation), ಮತ್ತು ಬಾಲ್ಯದಲ್ಲಿ ಬಿ.ಸಿ.ಜಿ (BCG) ಲಸಿಕೆ ಪಡೆಯುವುದು ಮುಖ್ಯ. ಸೋಂಕಿತರೊಂದಿಗೆ ನಿಕಟ ಸಂಪರ್ಕ ಕಡಿಮೆ ಮಾಡುವುದು, ಪೌಷ್ಟಿಕ ಆಹಾರ, ಮತ್ತು ರೋಗಲಕ್ಷಣಗಳಿದ್ದಲ್ಲಿ ಶೀಘ್ರ ಪರೀಕ್ಷೆ ಮಾಡಿಸಿಕೊಳ್ಳುವುದು ರೋಗ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಟಿಬಿ ಬಗ್ಗೆ ಪಿಡಿಓ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ಕ್ಷಯ ರೋಗಿಗಳ ಆಹಾರ ಪದ್ದತಿ :

ಅಪೌಷ್ಟಿಕತೆಯಿಂದ ಬಳಲುವ ಜನರಲ್ಲಿ ಟಿಬಿ ಸೋಂಕು ಕಾಣಿಸಿಕೊಳ್ಳುತ್ತದೆ. ಸರಿಯಾದ ಪೌಷ್ಟಿಕಾಂಶದ ಕೊರತೆ ಉಂಟಾದಾಗ ಕ್ಷಯ ರೋಗದ ಬ್ಯಾಕ್ಟೀರಿಯಾಗಳು ದೇಹವನ್ನು ಅಧಿಕ ಪ್ರಮಾಣದಲ್ಲಿ ಬಾಧಿಸುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ ಆರೋಗ್ಯವನ್ನು ಸುಧಾರಿಸುವಂತಹ ಜೀವಸತ್ವ, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಕಬ್ಬಿಣಾಂಶ, ವಿಟಮಿನ್ ಬಿ, ಹೆಚ್ಚಿಸುವಂತಹ ಹಸಿರು ತರಕಾರಿ, ಸೊಪ್ಪು, ಸಿರಿಧಾನ್ಯಗಳ ಆಹಾರ, ಕ್ಯಾರೆಟ್, ಚೆರ್ರಿ, ಟೊಮ್ಯಾಟೋ ಹಾಗೂ ವಿಟಮಿನ್ ಸಿ ಭರಿತವಾದ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಎಂದು ತಾಲೂಕು ಕ್ಷಯರೋಗ ಹಿರಿಯ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ ಮಾಹಿತಿ ನೀಡಿದರು.

ಇಓ ಮಹ್ಮದ್ ಅಕ್ರಮ ಪಾಶಾ, ಮನರೇಗಾ ಸಹಾಯಕ ನಿರ್ದೇಶಕ ಪಂಡಿತ್ ಸಿಂದೆ, ಶ್ರೀಮಂತ ಸಂಗಾವಿ, ಮನರೇಗಾ ಜಿಲ್ಲಾ ತಾಂತ್ರಿಕ ಸಿಬ್ಬಂದಿ ರಾಜು ವಂಟಿ, ಗಣೇಶ, ತಾಲೂಕು ಕ್ಷಯರೋಗ ಹಿರಿಯ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ, ಶ್ರೀಕಾಂತ್ ಇದ್ದರು.

“ತಾಲೂಕಿನಲ್ಲಿ ಕ್ಷಯರೋಗ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಿಬಿ ಸೋಂಕಿತರನ್ನು ದತ್ತು ಪಡೆದುಕೊಂಡು, ಅವರ ಆರೋಗ್ಯ ಸುಧಾರಣೆ, ಮತ್ತು ಕ್ಷಯರೋಗ ತಡೆಗಟ್ಟಲು ಮುತುವರ್ಜಿವಹಿಸಿ ಅಗತ್ಯ ಕ್ರಮ ಜರುಗಿಸಲು ಪಂಚಾಯಿತಿ ಪಿಡಿಓ ಗಳಿಗೆ ಆದೇಶ ನೀಡಲಾಗುವುದು”.-ಮಹ್ಮದ್ ಅಕ್ರಮ ಪಾಶಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು.

Spread the love

Leave a Reply

Your email address will not be published. Required fields are marked *

error: Content is protected !!