ವಾಡಿ ರೈಲು ನಿಲ್ದಾಣದ ಪ್ರಬಂಧಕರಿಗೆ ಮನವಿ | ಕಾಲುದಾರಿಗೆ ತಡೆ, ಪರ್ಯಾಯ ಮಾರ್ಗಕ್ಕಾಗಿ ಬಿಜೆಪಿ, ವಿವಿಧ ಸಂಘಟನೆಗಳ ಒತ್ತಾಯ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ರೈಲು ನಿಲ್ದಾಣದ ಹತ್ತಿರದಿಂದ ಹನುಮಾನ ನಗರ, ವಿಜಯ ನಗರ, ಇಂದಿರಾ ನಗರ ಸೇರಿದಂತೆ ನಾಲ್ಕೈದು ಬಡಾವಣೆಗಳಿಗೆ ಸಂಪರ್ಕಿಸುವ ಕಾಲುದಾರಿಯನ್ನು ರೈಲ್ವೆ ಸಿಬ್ಬಂದಿ ತಡೆಮಾಡಿರುವುದಕ್ಕೆ ಬಿಜೆಪಿ, ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ಕರವೇ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪರ್ಯಾಯಕ್ಕೆ ಒತ್ತಾಯಿಸಿದರು.

ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ರೈಲು ನಿಲ್ದಾಣದ ಪ್ರಬಂಧಕ ಸಿ.ಎಚ್ ರಾಮಕೃಷ್ಣ ಅವರ ಮುಖಾಂತರ ಮೇಲಾಧಿಕಾರಿಗಳಿಗೆ ಪತ್ರ ರವಾನಿಸಿ, ವಿವರಿಸುತ್ತಾ ಮಾತನಾಡಿ, ವಾಡಿ ರೈಲ್ವೆ ಇಲಾಖೆಗೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವ ಪಟ್ಟಣ ಇದಾಗಿದೆ. ಆದರೆ ನೀವು ನಿರಂತರವಾಗಿ ಜನರಿಗೆ ಈ ರೀತಿ ತೊಂದರೆ ನೀಡುತ್ತಿದ್ದೀರಿ ಎಂದರು.

ಪಟ್ಟಣವು ರೈಲ್ವೆ ಹಳಿಗಳಿಂದ ಆವೃತವಾಗಿದ್ದು, ಹಳಿಯ ಮತ್ತೊಂದು ಭಾಗದಲ್ಲಿ ನಾಲ್ಕೈದು ಬಡಾವಣೆಗಳಿದ್ದು ಅಲ್ಲಿ ಸುಮಾರು 15 ರಿಂದ 20 ಸಾವಿರ ಜನರು ವಾಸಿಸುತ್ತಿದ್ದಾರೆ. ರೈಲು ನಿಲ್ದಾಣ ಪ್ರಾರಂಭದಿಂದ ಜನರಿಗೆ ಅನುಕೂಲಕರವಾಗಿದ್ದ ಪಾದಚಾರಿ ಮಾರ್ಗವನ್ನು ಇದ್ದಕ್ಕಿದ್ದಂತೆ ಮುಚ್ಚಲಾಗಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ.

ಮೇಲ್ಸೇತುವೆ ಮತ್ತು ಕೆಳಸೇತುವೆಗಾಗಿ ನಾವು ಪದೇ ಪದೇ ವಿನಂತಿಯ ಮನವಿ ಪತ್ರಗಳನ್ನು ಸಂಭಂದಿಸಿದ ಎಲ್ಲಾ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಆದರೂ ಅದು ನಿರ್ಮಾಣ ಮಾಡಿಲ್ಲ, ಈಗಿರುವ ಪಾದಚಾರಿ ಮಾರ್ಗವನ್ನು ಸಹ ನಿರ್ಬಂಧಿಸಿದ್ದೀರಿ. ಇದರಿಂದಾಗಿ ಜನರಿಗೆ ತೊಂದರೆಯಾಗಿದೆ. ಇದಕ್ಕೆ ಪರ್ಯಾಯ ಮಾರ್ಗ ಸೂಚಿಸಿ, ಸಂಚಾರಕ್ಕೆ ತಕ್ಷಣ ಅನುವು ಮಾಡಿಕೊಡಿ ಇಲ್ಲದಿದ್ದರೆ ಬರುವ ಜೂನ್ 8 ರಂದು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ ಅವರು ಮೇಲಾಧಿಕಾರಿಗಳಿಗೆ ಸಲ್ಲಿಸದ ಪತ್ರದ ಮೂಲಕ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಮಾಜಿ ಸದಸ್ಯರಾದ ಕಿಶನ ಜಾಧವ, ಅಂಬದಾಸ ಜಾಧವ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಮುಕ್ಕನಾಳ,ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾಂಬಳೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅರ್ಜುನ ಕಟ್ಡಿಮನಿ, ಮುಖಂಡರಾದ ಮಹಾಂತೇಶ ಬಿರಾದಾರ, ಪಂಡಿತ್ ಪವಾರ, ಹಾಜಪ್ಪ ಅರಸಣಗಿ, ಗೋವಿಂದ ಚವ್ಹಾಣ, ರಾಮಾಂಜನೇಯ ದದಾಸರಿ, ದೇವೇಂದ್ರ, ವಿಜಯ ಜಾನ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!