Oplus_0

ಅಳ್ಳೋಳ್ಳಿಯ ಸಾವಿರ ದೇವರ ಮಠದ ಶ್ರೀ ಸಂಗಮನಾಥ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಏಷ್ಯಾ ಅಂತರರಾಷ್ಟ್ರೀಯ ಸಂಸ್ಕೃತಿ ಅಕಾಡೆಮಿ, ಅಂತರರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಮಿಳುನಾಡಿನ ಹೊಸೂರುನಲ್ಲಿ ಸೆ.27 ರಂದು ನಡೆದ ಸಮಾರಂಭದಲ್ಲಿ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿಯ ಸಾವಿರ ದೇವರ ಸಂಸ್ಥಾನ ಮಠದ ಶ್ರೀ ಸಂಗಮನಾಥ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳು ತಿಳಿಸಿದ್ದಾರೆ.

ಪೂಜ್ಯ ಶ್ರೀಗಳು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪೂಜ್ಯ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದಕ್ಕೆ ತಾಪಂ ಮಾಜಿ ಅಧ್ಯಕ್ಷ ಶಾಂತಮಲ್ಲಪ್ಪ ಚಾಳಿಕಾರ್, ಅಯ್ಯಣ್ಣ ಸಂಗಾರ್, ಬಸವರೆಡ್ಡಿ ನಾಚವಾರ, ಶಾಂತಕುಮಾರ್ ಎಣ್ಣಿ ಅವರು ಸೇರಿದಂತೆ ಭಕ್ತಸಮೂಹ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.

ಪೂಜ್ಯರ ಸಾಮಾಜಿಕ, ವೈದ್ಯಕೀಯ ಸೇವೆ:

ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರದ ಕಡೆ ಮುಖಮಾಡಿದ ಪೂಜ್ಯರು ಅದೇ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಸಾಧನೆಯ ಪಥದಲ್ಲಿ ಮುನ್ನಡೆಯುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಂಡು, ಆಳವಾಗಿ ಅಧ್ಯಯನ ಮಾಡಿದ ಪರಿಣಾಮವಾಗಿ ಪ್ರಸ್ತುತ ಗ್ರಾಮೀಣ ಭಾಗದ ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.

ನಂಬಿ ಬಂದ ಭಕ್ತರಿಗೆ ಹಾಗೂ ಜನರನ್ನು ಅವರವರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿ ಮಂತ್ರದೊಂದಿಗೆ ಗಿಡಮೂಲಿಕೆಗಳ ಔಷಧಿ ನೀಡಿ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಮೂಳೆ ಮುರಿತಕ್ಕೆ ಹಾಗೂ ಕ್ಯಾನ್ಸರ್ ರೋಗಕ್ಕೆ ಔಷಧಿ ನೀಡಲಾಗುವುದು. ಅಲ್ಲದೇ ಶುಗರ್, ಚರ್ಮ ರೋಗ, ಮಾನಸಿಕ ವ್ಯಾಧಿಗೆ, ಕೈಕಾಲು ಬ್ಯಾನಿಗೆ ಸೇರಿದಂತೆ ಎಲ್ಲಾ ರೋಗಿಗಳಿಗೆ ಗಿಡಮೂಲಿಕೆಗಳ ಔಷಧ ನೀಡಲಾಗುವುದು ಎಂದು ಹೇಳಲಾಗಿದೆ.

ವಿಶೇಷವಾಗಿ ಭಾನುವಾರ ಹಾಗೂ ಗುರುವಾರ ನೂರಾರು ಸಂಖ್ಯೆಯಲ್ಲಿ ಭಕ್ತರು ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳು ಬರುತ್ತಾರೆ ಆ ಎರಡು ದಿನಗಳಂದು ಅನ್ನದಾಸೋಹ ಕೂಡ ಇರುತ್ತದೆ.

ಭವ್ಯ ರಥೋತ್ಸವಕ್ಕೆ ದಶಮಾನೋತ್ಸವ ಸಂಭ್ರಮ:

ಹಾಳುಬಿದ್ದ ಸಾವಿರ ದೇವರ ಸಂಸ್ಥಾನ ಮಠವನ್ನು ಅಭಿವೃದ್ಧಿ ಮಾಡುವ ಮೂಲಕ ಭಕ್ತರ ಗಮನ ಸೆಳೆದ ಪೂಜ್ಯರು, 2016 ರಲ್ಲಿ ಪ್ರಥಮ ಬಾರಿಗೆ ಭಕ್ತರ ಸಹಕಾರದಿಂದ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿ ಯಶಸ್ವಿ ಮಾಡಿದ್ದರು. ಬರುವ ವರ್ಷ 2026 ಕ್ಕೆ ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿ ಆಗಲಿದೆ ಇದಕ್ಕೆ ಭಕ್ತಾದಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!