ಕಾಗಿಣಾ ನದಿ ಪ್ರವಾಹ ಮಳಖೇಡದ ಪ್ರಮುಖ ಸ್ಥಳಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ, ಪರಿಶೀಲನೆ
ನಾಗಾವಿ ಎಕ್ಸಪ್ರೆಸ್
ಸೇಡಂ: ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮವಾಗಿ ಸೇಡಂ ತಾಲೂಕಿನ ಮಳಖೇಡ ಕಾಗಿಣಾ ನದಿ ಪ್ರವಾಹ ಉಂಟಾಗಿದ್ದು, ಮಳಖೇಡದ ಪ್ರವಾಹ ಪೀಡಿತ ಸ್ಥಳಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳಖೇಡ ಕಾಗಿಣಾ ನದಿ ತೀರದ ತಾಂಡಾದ ಪ್ರತಿ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಮಳಖೇಡದ ಕೋಲಿವಾಡ, ದರ್ಗಾ ಕಾಲೋನಿ ಹಾಗೂ ಮಳಖೇಡ ಕಾಲೋನಿ ರಸ್ತೆ, ಹಳ್ಳ ಹಾಗೂ ಕಾಗಿಣಾ ನದಿ ತೀರದ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ತಾಲೂಕಾಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಈಗಾಗಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪಂಚಾಯತ್ ಅಧಿಕಾರಿಗಳು ಪ್ರವಾಹ ಪೀಡಿತರನ್ನು ಗುರುತಿಸಿ ನಿಗಾ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದರು.
ಕಾಗಿಣಾ ನದಿ ಪಾತ್ರದ ಸ್ಥಳದಲ್ಲಿ ಜನ ಜಾನುವಾರುಗಳು ಇಳಿಯದಂತೆ ಪೊಲೀಸರು ಹಾಗೂ ಅಧಿಕಾರಿಗಳು ಎಚ್ಚರಿಕೆ ನೀಡಿ, ಡಂಗುರ ಹೊಡಿಸಲು ತಿಳಿಸಿದ ಸಚಿವರು, ಸಾರ್ವಜನಿಕರು ಯಾವುದೇ ಭಯ ಪಡಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
