Oplus_0

ಎಕರೆಗೆ 30 ಸಾವಿರ, ಸಂತ್ರಸ್ತರಿಗೆ ಪರಿಹಾರ ನೀಡಿ |  ಬಳವಡಗಿ, ಕಡಬೂರ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸಚಿವ ಪ್ರಿಯಾಂಕ್ ಖರ್ಗೆಗೆ ಬೆಣ್ಣೂರಕರ್ ಆಗ್ರಹ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರತಿ ವರ್ಷ ಮಳೆಗಾಲದಲ್ಲಿ ಭೀಮಾ ನದಿಯ ಪ್ರವಾಹಕ್ಕೆ ತುತ್ತಾಗುವ ಬಳವಡಗಿ, ಕಡಬೂರ ಗ್ರಾಮಗಳನ್ನು ಸ್ಥಳಾಂತರ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಆಗ್ರಹಿಸಿದ್ದಾರೆ.

ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ವಸ್ತುಸ್ಥಿತಿ ಪರೀಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೊಮ್ಮೆ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿ ಹೋದ ಸಚಿವರು ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮಳೆ ನೀರು ಹಾಗೂ ಪ್ರವಾಹದಿಂದಾಗಿ ಬಳವಡಗಿ ಹಾಗೂ ಕಡಬೂರ ಗ್ರಾಮಗಳು ಜಲ ದಿಗ್ಬಂಧನಕ್ಕೆ ಒಳಗಾಗಿವೆ. ಪ್ರಸ್ತುತ 6 ಬಾರಿ ಪ್ರವಾಹದಿಂದಾಗಿ ಈ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋರಗಡೆ ಹೋಗುವುದಕ್ಕೆ ಆಗದೆ ಮನೆಯಲ್ಲಿಯೇ ಆತಂಕದಲ್ಲಿಯೇ ಜೀವನ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.

ರೈತರು ಪ್ರತಿ ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿದ್ದಾರೆ, ಪ್ರವಾಹದಿಂದಾಗಿ ಈ ಬಾರಿ ರೈತರ ಬೆಳೆ ಸಂಪೂರ್ಣ ನಾಶವಾಗಿವೆ ಹೀಗಾಗಿ ಅವರ ಜೀವನ ಅತಂತ್ರದಲ್ಲಿದೆ ಆದ್ದರಿಂದ ಕೂಡಲೇ ಪ್ರತಿ ಎಕರೆಗೆ 30 ಸಾವಿರ ಪರಿಹಾರ ಒದಗಿಸಬೇಕು ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಭಾಗದ ಕೊಲ್ಲೂರು, ತರಕಸಪೇಟ್, ಚೌಕಂಡಿ ತಾಂಡಾ, ಸನ್ನತಿ, ಬನ್ನಟ್ಟಿ, ಕನಗನಳ್ಳಿ, ಹುಳಂಡಗೇರಾ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದರಿಂದ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ ಇದರಿಂದ ಈ ಗ್ರಾಮಗಳ ಜನರು ಸಹ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಅನೇಕ ಹಳ್ಳಿಗಳು ಸಿಲುಕಿ ರೈತರು ಹಾಗೂ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿವೆ ಹಾಗೂ ನೂರಾರು ಜನರ ಮನೆಗಳು ಹಾನಿಯಾಗಿವೆ ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾವಧಾನದಿಂದ ಎಲ್ಲಾ ಕಡೆ ಭೇಟಿ ನೀಡಿ ಸಾಂತ್ವನ ಹೇಳಿ, ದೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ತರಾತುರಿಯಲ್ಲಿ ಕೆಲ ಹಳ್ಳಿಗಳಿಗೆ ಕಾಟಾಚಾರಕ್ಕೆ ಭೇಟಿ ನೀಡಿ ತೆರಳಿದ್ದಾರೆ ಎಂದು ಟೀಕಿಸಿದರು.

ಭೀಮಾ ನದಿಯ ಪ್ರವಾಹದಿಂದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ, ರೈತರು ಕಷ್ಟಪಟ್ಟು ಬೆಳೆದ ಭತ್ತ, ಹತ್ತಿ, ತೊಗರಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರ ಬದುಕು ದುಸ್ತರವಾಗಿದೆ ಈ ಕೂಡಲೇ ಸಚಿವರು ಈಕಡೆ ಭೇಟಿ ನೀಡಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ವಿಠಲ್ ವಾಲ್ಮೀಕಿ ನಾಯಕ, ಭೀಮರೆಡ್ಡಿ ಕುರಾಳ, ಬಂದಪ್ಪ ಕಟ್ಟಿಮನಿ, ಕಾಶಿನಾಥ ಶೇಟಗಾರ್, ನಾಗರಾಜಗೌಡ ಗೌಡಪ್ಪನೋರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!