Oplus_131072

ಅ.6 ರಂದು ಕಲಬುರಗಿ ನಗರದಲ್ಲಿ ಹಮ್ಮಿಕೊಳ್ಳಬೇಕಿದ್ದ ಜೆಡಿಎಸ್ ಬೃಹತ್ ರೈತ ಆಂದೋಲನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಗುತ್ತೇದಾರ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಸಂಭವಿಸಿದ ಅತೀವ ಬೆಳೆಹಾನಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ಹಸಿ ಬರ ಜಿಲ್ಲೆ ಎಂದು ಘೋಷಿಸಬೇಕು ಹಾಗೂ ಕಲಬುರಗಿ ಜಿಲ್ಲೆಯ ರೈತರಿಗಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಇದೇ ಅ. 6 ರಂದು ನಗರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ಬೃಹತ್ ರೈತ ಆಂದೋಲನವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಕಲಬುರಗಿ ಜಿಲ್ಲೆಗೆ ಭೇಟಿ ಕೊಟ್ಟು ಬೆಳೆಹಾನಿ ಕುರಿತು ವೈಮಾನಿಕ ಸಮೀಕ್ಷೆ ಕೈಗೊಂಡ ಬಳಿಕ ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿಧಿ ಪ್ರಾಧಿಕಾರ) ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್ ಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ. 8,500 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಹಾಗಾಗಿ, ಹೆಚ್ಚುವರಿ ಪರಿಹಾರ ಘೋಷಣೆಯಿಂದಾಗಿ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಗೆ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ, ನೀರಾವರಿ ಬೆಳೆಗಳಿಗೆ ಕೇಂದ್ರ ಸರ್ಕಾರದ ರೂ.17,000ಕ್ಕೆ ರಾಜ್ಯ ಸರ್ಕಾರದ ರೂ.8,500 ಸೇರ್ಪಡೆ ಮಾಡಿ ರೂ.25,500. ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಕೇಂದ್ರ ಸರ್ಕಾರದ ರೂ.22,500ಕ್ಕೆ ರಾಜ್ಯದ ಪಾಲು ರೂ.8,500 ಸೇರಿ ರೂ.31,000 ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಇದರಿಂದಾಗಿ, ಎನ್.ಡಿ.ಆರ್.ಎಫ್. ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಸೇರಿ ರಾಜ್ಯ ಸರ್ಕಾರದಿಂದ ರೂ.2,000 ಕೋಟಿಗೂ ಹೆಚ್ಚು ಪರಿಹಾರ ರೈತರಿಗೆ ನೀಡಲಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳು ವಾಗ್ದಾನ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವ ನಿರ್ಧಾರವನ್ನು ಜೆಡಿಎಸ್ ಜಿಲ್ಲಾ ಘಟಕ ಕೈಗೊಂಡಿದೆ. ಹಾಗಾಗಿ ಅಕ್ಟೋಬರ್ 6ರಂದು ಜೆಡಿಎಸ್ ಪಕ್ಷದ ವತಿಯಿಂದ ಕಲಬುರಗಿ ನಗರದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ “ಬೃಹತ್ ರೈತರ ಆಂದೋಲನ” ಅನಿರ್ದಿಷ್ಟ ಕಾಲದವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!