Oplus_0

ಯಾರಿಗೋ ಖುಷಿ ಪಡಿಸಲು ಸಮಾಜ ಬಂಧುಗಳನ್ನು ಮೂರ್ಖರನ್ನಾಗಿ ಮಾಡುವ ಹುನ್ನಾರ | ಕೋಲಿ-ಕಬ್ಬಲಿಗ- ತಳವಾರ ಸಮುದಾಯಗಳು ಯಾರ ಸ್ವತ್ತು ಅಲ್ಲ: ಅವ್ವಣ್ಣ ಮ್ಯಾಕೇರಿ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2 ರಂದು ಕೋಲಿ-ಕಬ್ಬಲಿಗ-ಮತ್ತು ತಳವಾರ ಸಮುದಾಯಗಳ ಪಥ ಸಂಚಲನ ನಡೆಸಲಾಗುವುದೆಂದು ಕೆಲವು ಮುಖಂಡರ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕೋಲಿ-ಕಬ್ಬಲಿಗ-ಮತ್ತು ತಳವಾರ ಸಮುದಾಯಗಳು ಯಾರ ಸ್ವತ್ತು ಅಲ್ಲ, ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಮತ್ತು ಯಾರಿಗೋ ಖುಷಿ ಪಡಿಸಲು ಸಮಾಜ ಬಂಧುಗಳನ್ನು ಮೂರ್ಖರನ್ನಾಗಿ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಸಮಾಜದ ಬಂಧುಗಳು ಇಂತಹ ಹೇಳಿಕೆಗೆ ಕಿವಿ ಕೊಡದೇ ಜಾಗೃತರಾಗಬೇಕೆಂದು ಎಂದು ಕೋಲಿ ಸಮಾಜ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಳವಾರ ಮತ್ತು ಪರಿವಾರ ಸಮುದಾಯಗಳ ಬಹು ದಿನಗಳ ಎಸ್.ಟಿ. ಬೇಡಿಕೆಯನ್ನು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ನಮ್ಮ ಜನರಿಗೆ ನೀಡಿದೆ. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್‌ಟಿ ಪ್ರಮಾಣ ಪತ್ರ ತಡೆಹಿಡಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿ ಕಾರಿದರು.

ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೃಷಿಕರು, ಉದ್ಯೋಗಸ್ಥರಿಗೆ ಪ್ರಮಾಣ ಪತ್ರವಿಲ್ಲದೆ ಒದ್ದಾಡುತ್ತಿದ್ದಾರೆ. ನಿರುದ್ಯೋಗಿ ಯುವಕರು ಸರ್ಕಾರಿ ಅರೆ ಸರ್ಕಾರಿ ಹುದ್ದೆಗಳಲ್ಲಿ ಆಯ್ಕೆಯಾದವರಿಗೆ ಸಿಂಧುತ್ವ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಉದ್ಯೋಗದಲ್ಲಿರುವವರಿಗೆ ಸಿಂಧುತ್ವವಿಲ್ಲದೆ ಬಡ್ತಿಯನ್ನು ಹೊಂದದೆ ನರಳಾಡುತ್ತಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳು ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಉದ್ಭವಿಸಿರುವುದರಿಂದ ಸಮುದಾಯವು ಈ ಕಡೆ ಕೆಟಗರಿ-1 ಒಂದರಲ್ಲಿಯೂ ಇಲ್ಲ, ಆ ಕಡೆ ಎಸ್‌ಟಿ ಪ್ರಮಾಣ ಪತ್ರವಿಲ್ಲದೆ ವಿಲವಿಲ ಒದ್ದಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಮುಖಂಡರು ಇಂತಹ ಪ್ರಮಾಣ ಪತ್ರ ವಿತರಣೆಗಾಗಿ ಚಿತ್ತಾಪುರದಲ್ಲಿ ಪಥ ಸಂಚಲನ ಮಾಡಿದರೆ ಪ್ರಮಾಣ ಪತ್ರಗಳು ಸಿಗುತ್ತವೆ ಎಂಬುದು ಹಾಸ್ಯಾಸ್ಪದವಾಗಿದೆ. ಯಾರು ಪ್ರಮಾಣ ಪತ್ರಗಳು ತಡೆ ಹಿಡಿದಿದ್ದಾರೆ? ಯಾರು ಸಿಂಧುತ್ವ ತಡೆಹಿಡಿದಿದ್ದಾರೆ? ಯಾರ ಪರವಾಗಿ ಪಥ ಸಂಚಲನ ಮಾಡುತ್ತಿದ್ದಾರೆ? ಎಂಬುದು ಜನರಿಗೆ ಅರ್ಥವಾಗುತ್ತದೆ. ಸಮಾಜ ಜನರಿಗೆ ಮೂರ್ಖರನ್ನಾಗಿ ಮಾಡುವ ಬದಲು ನಿಮ್ಮ ಉಸ್ತುವಾರಿ ಸಚಿವರಿಗೆ ಪ್ರಮಾಣ ಪತ್ರ ಮತ್ತು ಸಿಂಧುತ್ವ ನೀಡಲು ಹೇಳಿ ಆಮೇಲೆ ಪಥ ಸಂಚಲನ ಮಾಡಬೇಕೆಂದು ಕಿವಿಮಾತು ಹೇಳಿದರು.

ಆರ್ ಎಸ್ ಎಸ್ ಆಗಿರಬಹುದು, ಭೀಮ್ ಆರ್ಮಿ ಇತರೆ ಯಾವುದೇ ಸಂಘಟನೆಗಳು ತಮ್ಮ ಸಮುದಾಯದ ಜಾಗೃತಿಗಾಗಿ ನಡೆಸುವ ಯಾವುದೇ ಸಭೆ, ಪಥಸಂಚಲನ, ನ್ಯಾಯಕ್ಕಾಗಿ ನಡೆಯುವ ಹೋರಾಟಕ್ಕೆ ನಮ್ಮ ಸಹಕಾರ ಮತ್ತು ಬೆಂಬಲವಿರುತ್ತದೆ ಆದರೆ ಆಯಾ ಸಂಘಟನೆಗಳು ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿಕೊಂಡು ತಮ್ಮ ಪಥಸಂಚಲನ ನಡೆಸಿ ಸಾಮಾಜಿಕ ಸಾಮರಸ್ಯ ಸಾರಬೇಕೆಂಬ ಕಳಕಳಿ ನಮ್ಮದಾಗಿದೆ ಎಂದರು.

ಕಲಬುರಗಿ ಜಿಲ್ಲೆ ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಾಗಿದ್ದು, ಶರಣರು, ಸಂತರು, ಬುದ್ಧ, ಬಸವ, ಅಂಬೇಡ್ಕರ ವಿಚಾರಗಳಿಂದ ಕೂಡಿರುವ ಸಾಮಾಜಿಕ ಸಾಮರಸ್ಯದ ನಾಡಾಗಿರುತ್ತದೆ. ಆದರೆ ತಮ್ಮ ರಾಜಕೀಯ ದುರುದ್ದೇಶದಿಂದ ಜಾತಿ-ಜಾತಿಗಳ ಮಧ್ಯೆ ಕಂದಕವನ್ನು ಸೃಷ್ಟಿಸಿ ಯಾವ ಪುರುಷಾರ್ಥಕ್ಕಾಗಿ ವಿವಿಧ ಸಂಘಟನೆಗಳ ಪಥಸಂಚಲನಕ್ಕೆ ಪುಷ್ಟಿ ನೀಡುತ್ತಿರುವುದು ಅರ್ಥವಾಗುತ್ತಿಲ್ಲ, ಆಯಾ ಸಮಾಜಗಳ ಜಾಗೃತಿಗಾಗಿ ಪಥಸಂಚಲನಕ್ಕೆ ಬೇರೆ ಬೇರೆ ದಿನಾಂಕಗಳನ್ನು ಜಿಲ್ಲಾಡಳಿತ ಸಹಕಾರದಿಂದ ಪಡೆದುಕೊಂಡು ಮಾಡಲು ಸೂಚಿಸಿ, ಸಾಮಾಜಿಕ ಸಾಮರಸ್ಯದಿಂದ ಎಲ್ಲರಿಗೂ ನ್ಯಾಯ ಸಿಗುವಂತಾಗಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಿದಂತಾಗುತ್ತದೆ, ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ದಯವಿಟ್ಟು ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೇ ತಮ್ಮ ತಂದೆ ಡಾ.ಮಲ್ಲಿಕಾರ್ಜುನ ಖರ್ಗೆಯವರ ಸಲಹೆಯನ್ನಾದರೂ ಪಡೆದುಕೊಳ್ಳಬೇಕು. ಏಕೆಂದರೆ ಅವರ ಸುದೀರ್ಘ 50 ವರ್ಷದ ರಾಜಕಾರಣದಲ್ಲಿ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಎಂದೂ ಅವಕಾಶ ನೀಡಿರುವುದಿಲ್ಲ ಎಂದು ಹೇಳಿದರು.

ಕೋಲಿ ಸಮಾಜದ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ಜಿಲ್ಲೆಯಲ್ಲಿ ಮಾನದ ಅಭಿವೃದ್ಧಿ ಸೂಚ್ಯಂಕ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಕೂಡಾ ಕೊನೆಯ ಸ್ಥಾನದಲ್ಲಿದೆ, ಸುಮಾರು 23 ಕಾಲೇಜುಗಳನ್ನು ಶೂನ್ಯ ಫಲಿತಾಂಶವಾಗಿದೆ. ಮಕ್ಕಳ ಅಪೌಷ್ಟಿಕ ಕೊರತೆಗೆ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ತಲಾ ಆದಾಯ 3 ಲಕ್ಷವಿದ್ದರೇ, ಜಿಲ್ಲೆಯಲ್ಲಿ 1.53 ಲಕ್ಷವಿದ್ದು ಕೊನೆಯ ಸ್ಥಾನದಲ್ಲಿದೆ. ಈ ವರ್ಷ ಅತಿವೃಷ್ಟಿಯಿಂದ 7.06 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಜಿಲ್ಲಾಡಳಿತ ಕೇವಲ 3.20 ಲಕ್ಷ ಹೆಕ್ಟರ್ ಮಾತ್ರ ನಮೂದಿಸಿ, ರೈತರಿಗೆ ಮೋಸ ಮಾಡಿರುತ್ತಾರೆ. ಇದರಿಂದ ರೈತರಿಗೆ ಒಂದು ರೂಪಾಯಿ ಕೂಡಾ ಇಲ್ಲಿಯವರೆಗೆ ಪರಿಹಾರ ನೀಡದೇ ಇರುವುದರಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಅತಿವೃಷ್ಟಿಯಿಂದ ಸಾರ್ವಜನಿಕರಿಗೆ ಮನೆಗಳು. ಬ್ರಿಡ್ಜ್ ಗಳು, ರಸ್ತೆಗಳು, ಗುಂಡಿಗಳಾಗಿದ್ದರಿಂದ ತೊಂದರೆಯಾಗುತ್ತಿದೆ. ಸುಮಾರು 2 ವರ್ಷದಿಂದ ಕೆ.ಡಿ.ಪಿ ಮತ್ತು ದಿಶಾ ಸಭೆಯಾಗದೇ ಇರುವುದರಿಂದ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದ್ದು ಈ ಬಗ್ಗೆ ಚಿಂತನೆ ಮಾಡಿ, ಇಲ್ಲವಾದಲ್ಲಿ ಖುರ್ಚಿ ಖಾಲಿ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಮುಖಂಡರಾದ ತಮ್ಮಣ್ಣ ಡಿಗ್ಗಿ, ಸುರೇಶ್ ಬೆನಕನಳ್ಳಿ, ಸಾಬಣ್ಣ ಜಾಲಗಾರ, ಶರಣಪ್ಪ ನಾಟೀಕಾರ ಆಳಂದ, ದಿಗಂಬರ ಮಾದನಗೇರಿ, ಬಸವರಾಜ ಗುಂಡಲಗೇರಿ, ಸೂರ್ಯಕಾಂತ ಅವರಾದ, ಗಿರಿರಾಜ್ ನಾಟೀಕಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!