Oplus_0

ನವೆಂಬರ್ 1 ರಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ನಿರ್ಧಾರ: ನರಿಬೋಳ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಪ್ರತ್ಯೇಕ ರಾಜ್ಯವಾಗಿ ಉದಯವಾಗಬೇಕು. ನಮ್ಮ ಭಾಗದ ಜನ ಉದ್ಧಾರವಾಗಬೇಕು ಅದಕ್ಕಾಗಿ ಇದೇ ಅ. 31ರಂದು ಜಗತ್ ವೃತ್ತದ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಹತ್ತಿರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಹಗಲು ರಾತ್ರಿ ಧರಣಿಯನ್ನು ಮಾಡಿ ರಾಜ್ಯೋತ್ಸವ ದಿನವಾಗಿರುವ ನವೆಂಬರ್ 1ರಂದು ಬೆಳಿಗ್ಗೆ 7.15 ಕ್ಕೆ ಧರಣಿ ಸ್ಥಳದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ತೇರಳಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ನಿರ್ಧರಿಸಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅದ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದುಳಿದ ಹಣೆಪಟ್ಟಿ ಹೊತ್ತ ನಮಗೆ ಮುಕ್ತಿ ದೊರೆಯುವ ಪ್ರಯತ್ನದಲ್ಲಿ ತಾವು ಮೊದಲಿಗರು. ಆದರೂ ಸಹ ಹತ್ತಾರು ವರ್ಷಗಳು ಗತಿಸಿದರೂ ಸಹ ನಮ್ಮ ಭಾಗದ ಹೆಸರು ಕಲ್ಯಾಣವಾಯಿತೇ ಹೊರತು, ನಮ್ಮ ಜನಕ್ಕೆ ಕಲ್ಯಾಣವಾಗಲಿಲ್ಲ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ಪ್ರದೇಶ ಎಂದು ಅಷ್ಟೊ ಇಷ್ಟೋ ಅನುದಾನ ಸರ್ಕಾರ ಬಿಡುಗಡೆಗೊಳಿಸಿದರೂ ಪ್ರಯೋಜನವಾಗುತ್ತಿಲ್ಲ. ರಾಜ್ಯದಲ್ಲೇ ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಕೆಳಗಿಂದ ಎರಡನೇ ಸ್ಥಾನಕ್ಕೇರಿದೆ. ಎಸ್ಸೆಸ್ಸೆಲ್ಸಿ ಯಲ್ಲಿ ಮೇಲಿಂದ ಕೊನೆಯ ಸ್ಥಾನಕ್ಕಿಳಿದಿದೆ. ಇದಲ್ಲದೇ ಕಲಬುರಗಿಯ ವಿಮಾನ ನಿಲ್ದಾಣ ವಿಮಾನಗಳ ಹಾರಾಟವಿಲ್ಲದೆ ಬರಿದಾಗುತ್ತಾ ಸಾಗಿದೆ. ರೈಲ್ವೆ ಡಿಎಸ್ಪಿ ಕಚೇರಿ ಹುಬ್ಬಳ್ಳಿ ಕೈಸೇರಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ನಮ್ಮ ಭಾಗವನ್ನು ಕಡೆಗಣಿಸಲಾಗುತ್ತಿದೆ. ಅಷ್ಟೇ ಏಕೆ, ಕಾನೂನು ಹದಗೆಟ್ಟಿದೆ. ಇಲ್ಲಿ ದೀನ, ದಲಿತರ, ಬಡವರ ಮೇಲೆ‌ ಹಲ್ಲೆಗಳಾಗುತ್ತಿದ್ದರೂ ಸಹ ಕ್ರಮ ಕೈಗೊಳ್ಳುವಲ್ಲಿ ವಿಫಲತೆಗಳು ಎದುರಾಗಿವೆ ಎಂದು ತಿಳಿಸಿದ್ದಾರೆ.

ಶೈಕ್ಷಣಿಕವಾಗಿ ಪ್ರತಿಯೊಂದರಲ್ಲೂ ಕೊನೆಯ ಸ್ಥಾನ ಪಡೆಯುತ್ತಿದ್ದೇವೆ. ವೈದ್ಯಕೀಯ ಸೌಲಭ್ಯಗಳು ಕೇವಲ ಉಳ್ಳವರ ಪಾಲಾಗುತ್ತಿವೆ. ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಸರಿಯಾದ ರಸ್ತೆ, ನೀರು, ಚರಂಡಿ ವ್ಯವಸ್ಥೆಗಳಿಲ್ಲದೆ ಅನೇಕ ಗ್ರಾಮಗಳು ನರಕದ ವಾತಾವರಣದಲ್ಲಿ ಜೀವಿಸುತ್ತಿವೆ ಎಂದರು.

ಮಕ್ಕಳಲ್ಲಿನ ಅಪೌಷ್ಠಿಕತೆಯ ಕೊರತೆಯಲ್ಲಿ ನಾವು ಕೊನೆಯ ಸ್ಥಾನದಲ್ಲಿದ್ದೇವೆ. ಶಿಶು ಮರಣ ಪ್ರಮಾಣದಲ್ಲೂ ರಾಜ್ಯದಲ್ಲಿ ನಾವು ಮೊದಲ ಸ್ಥಾನದಲ್ಲಿರುವುದು ತೀರಾ ಕಳವಳಕಾರಿ ವಿಷಯವಾಗಿದೆ. ಇಲ್ಲಿ ಉದ್ಯಮಗಳಿದ್ದರೂ ಸ್ಥಳೀಯರಿಗೆ ಉದ್ಯೋಗಗಳಿಲ್ಲ, ಭಾಗಶಃ ನಮ್ಮ ಭಾಗದ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಎಲ್ಲಾ ರೀತಿಯಿಂದ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿಯುತ್ತಿದೆ. 371ಜೆ ಸಂಪುರ್ಣವಾಗಿ ವಿಫಲವಾಗಿದೆ ಸಂಪೂರ್ಣ ಅನುಷ್ಠಾನ ಯಕ್ಷಪ್ರಶ್ನೆಯಾಗಿದೆ ಸರ್ಕಾರಿ ಉದ್ಯೋಗದಲ್ಲಿಯಾಗಿರಲಿ,  ನೇಮಕಾತಿಯಲ್ಲಾಗಿರಲಿ, ಬಡ್ತಿಯಲ್ಲಾಗಿರಲಿ, ಪೋಲಿಸ್, ಅಬಕಾರಿ, ಕಂದಾಯ, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಧಿಕಾರಿಗಳಿಗೆ ಅನ್ಯಾಯ ಆಗಿದೆ, ಆಗುತ್ತಿರುವುದು ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಸರಕಾರಿ ನೌಕರಾಗಿರುವುದರಿಂದ ಪ್ರಶ್ನೆ ಮಾಡಲ್ಲಾ ಪ್ರಶ್ನೆ ಮಾಡಿದರೆ ಆಳುವವರ ಕೆಂಗೆಣ್ಣಿಗೆ ಗುರಿಯಾಗಬೇಕಾಗಬಹುದು ಎಂಬ ಭಯದಲ್ಲಿ ಉಸುರ್ ಎಂದು ಅನಿವಾರ್ಯವಾಗಿ ನೌಕರಿ ಮಾಡುತ್ತಾ ಇರುವುದರಿಂದ ನೌಕರರಿಗೆ ಅನ್ಯಾಯದ ಮೇಲೆ ಅನ್ಯಾಯ ಆಗುತ್ತಿದೆ. ಇನ್ನು ಅನ್ನದಾತನ ಪರಿಸ್ಥಿತಿ ಹೇಳಲೆಬಾರದು ಬೆಂಗಳೂರು ಮೈಸೂರು, ಮಂಡ್ಯ, ಹಾಸನ ಕಡೆ ಅಡಿಕೆಯ ಒಂದು ಗೀಡಾ ಹಾಳಾದರೆ ರಾಜ್ಯ ಸರ್ಕಾರ ಬಾಯಿ ಬಡಕೊಂಡು ಕೇಂದ್ರಕ್ಕೆ ನಿಯೋಗ ಹೋಗುತ್ತಾರೆ, ಆಕಡೆ ರಸ್ತೆ ಸ್ವಲ್ಪ ಹಾಳಾದರೂ ಸಾಕು ಸರ್ಕಾರವೇ ವಿಕ್ಷಣೆಗಾಗಿ ತೆರಳುತ್ತೆ ಆದರೆ ಕ-ಕ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾಳಾದರು ರೈತನ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವಂತಹ ಸಂದರ್ಭ ಕಂಡುಬರುತ್ತಿಲ್ಲಾ ಇಲ್ಲಿ ಸೇತುವೆಗಳೆ ಕೋಚ್ಚಿಕೊಂಡು ಹೋದರೂ ಕೇಳುವವರಿಲ್ಲಾ ಇದೆಲ್ಲ ನೋಡಿದ್ರೆ ಅನ್ಯಾಯದ ಪರಮಾವಧಿ ಎದ್ದು ಕಾಣುತ್ತದೆ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ನಮ್ಮ ಭಾಗ ಪ್ರತ್ಯೇಕ ರಾಜ್ಯವಾಗಬೇಕೆಂಬ ಹೋರಾಟ ನಿರಂತರವಾಗಿದೆ. ಇದು ನಿಲ್ಲಲ್ಲ. ಮತ್ತಷ್ಟು ಉಗ್ರ ರೂಪ ಪಡೆಯುತ್ತೆ. ಈ ಭಾರಿ ಎಂಥದೆ ಪರಿಸ್ಥಿತಿ ಎದುರಾದರು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿ ಕ-ಕ ಪ್ರದೇಶಕ್ಕೆ ಕಡೆಗಣನೆ ಮಾಡುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆಯನ್ನು ನೀಡುತ್ತೇವೆ. ಈ ಹೋರಾಟಕ್ಕೆ ನಾಡಿನ ಮಠಾಧೀಶರು,  ಜನಪರ, ರೈತಪರ, ಹಿಂದೂಪರ, ದಲಿತಪರ ಸಂಘಟನೆಗಳು ಉಧ್ಯಮಿಗಳು ಬೆಂಬಲಿಸುವ ಭರವಸೆ ನೀಡಿರುವುದು ನಮ್ಮ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಸಾರ್ವಜನಿಕರು ಬೆಂಬಲಿಸಿ ಹೋರಾಟವನ್ನು ಯಶಸ್ವಿಗೋಳಿಸಬೆಕಾಗಿರುವುದು ಜರೂರ್ ಇದೆ ಅದಕ್ಕಾಗಿ ಈ ಬಾರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!