ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಬೇಕೆಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಪೂರ್ವಗ್ರಹ ಪೀಡಿತದಿಂದ ಕೂಡಿದೆ: ಅಯ್ಯಪ್ಪ ರಾಮತೀರ್ಥ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್) ನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಹೇಳಿಕೆ ಪೂರ್ವಗ್ರಹ ಪೀಡಿತದಿಂದ ಕೂಡಿದೆ ಎಂದು ಬಿಜೆಪಿ ಜಿಲ್ಲಾ ಮುಖಂಡ ಅಯ್ಯಪ್ಪ ರಾಮತೀರ್ಥ ತಿರುಗೇಟು ನೀಡಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿಗೆ ಚಿತ್ತಾಪುರ ಕ್ಷೇತ್ರದ ಶಾಸಕರು ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ ಖರ್ಗೆಯವರು ಸಾರ್ವಜನಿಕವಾಗಿ ಕೇಂದ್ರ ಸರ್ಕಾರದ ವಿರೋಧಿ ನೀತಿ ಹಾಗೂ ಆರ್.ಎಸ್.ಎಸ್ ನ್ನು ನಿಷೇಧಿಸಬೇಕು ಎಂಬುದು ಹಾಗೂ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಹಗುರವಾದ ಹೇಳಿಕೆಗಳು ಇದು ಅವರ ಅಪ್ರಬುದ್ಧ ಹಾಗೂ ದ್ವೇಷ, ಅಸೂಯೆ, ಮತ್ತು ಪೂರ್ವಗ್ರಹ ಪೀಡಿತದಿಂದ ಕೂಡಿವೆ ಎಂದು ತಿಳಿಸಿದ್ದಾರೆ.
ಜನರಿಂದ ಆಯ್ಕೆಯಾಗಿ ಸಂವಿಧಾನದ ಉನ್ನತ ಸ್ಥಾನದಲ್ಲಿರುವ ಸಚಿವರು ಈ ರೀತಿಯ ಹೇಳಿಕೆಗಳು ಶೋಭೆ ತರುವಂತದ್ದಲ್ಲ. ನಿಮ್ಮ ಅಧಿಕಾರ ಶಾಶ್ವತವಲ್ಲ. ಅದು ಜನತೆ ಕೊಟ್ಟ ಭಿಕ್ಷೆ ಎಂದು ಮರೆಯಬೇಡಿ ಎಂದು ಕುಟುಕಿದ್ದಾರೆ.
ಅತಿವೃಷ್ಟಿಯ ಸಮಯದಲ್ಲಿ ಸಂತ್ರಸ್ತರ ಬಗ್ಗೆ ಕರ್ತವ್ಯವನ್ನು ಮರೆತು ಈ ದೇಶದ ಪ್ರಧಾನಿಗೆ ಪ್ರಧಾನ ಮಂತ್ರಿಗಳು ಏನು ಕತ್ತೆ ಕಾಯುತ್ತಿದ್ದಾರಾ? ಎಂದು ಅಪಮಾನ ಮಾಡುತ್ತೀರಿ. ಈಗ ನೋಡಿದರೆ ಆರ್.ಎಸ್ .ಎಸ್ ನ್ನೂ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಬೇಕು ಎಂದು ಸತ್ಯಕ್ಕೆ ದೂರವಾದ ಕಾರಣಗಳನ್ನು ನೀಡಿ ಅನಾವಶ್ಯಕವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೀರಿ. ಆರ್. ಎಸ್.ಎಸ್ .ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲದ ಆಧಾರ ರಹಿತ ನಿಮ್ಮ ಹೇಳಿಕೆಗಳು ಕೇವಲ ಪೂರ್ವಾಗ್ರಹ ಪೀಡಿತದಿಂದ ಕೂಡಿವೆ ಎಂದು ಪುನರುಚ್ಚರಿಸಿದ್ದಾರೆ.
ಕಾಂಗ್ರೇಸ್ ಪಕ್ಷದ ಕುತಂತ್ರ ಹಾಗೂ ಜಾತಿ ರಾಜಕಾರಣದಿಂದ ಒಡೆದು ಹೋಗಿರುವ ಹಿಂದುಗಳ ಹೃದಯಗಳನ್ನು ಒಂದು ಒಂದುಗೂಡಿಸಿ ಈ ದೇಶದ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರಭಕ್ತಿಯನ್ನು ಹುಟ್ಟು ಹಾಕುವುದೇ ಆರ್.ಎಸ್.ಎಸ್ ನ ಮುಖ್ಯ ಗುರಿ ಆಗಿದೆ. ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲದ ಸಾಮ್ರಾಜ್ಯವನ್ನು ಮರುವಿಸ್ತರಿಸಿ ಅಖಂಡ ಭಾರತದ ಪರಿಕಲ್ಪನೆಯನ್ನು ಪುನರ್ ನಿರ್ಮಿಸುವ ದೂರ ದೃಷ್ಟಿಯ ಧ್ಯೇಯವನ್ನು ಹೊಂದಿದ ದೇಶದ ಏಕೈಕ ಸಂಘಟನೆ ಎಂದರೆ ಅದು ಆರ್.ಎಸ್.ಎಸ್ ಎಂದು ಹೇಳಬಹುದಾಗಿದೆ. ಈಗ 100 ನೇ ವರ್ಷಾಚರಣೆ ನಿಮಿತ್ತ ದೇಶಾದ್ಯಂತ ಕಾರ್ಯಕ್ರಮಗಳು ಪಥಸಂಚಲನ ಮಾಡುತ್ತಿರುವಾಗ ನಿಮಗೇಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದ್ದಾರೆ.
ಒಂದು ಶತಮಾನದಷ್ಟು ತನ್ನದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿರುವ ಹಾಗೂ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಹಾಗೂ ಶಿಸ್ತಿನ ಪಡೆಯನ್ನು ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ದೇಶದಲ್ಲಿ ಕರೋನಾ ಮಹಾಮಾರಿ ಹಾಗೂ ಪ್ರಕೃತಿ ವಿಕೋಪ ದಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ನೀಸ್ವಾರ್ಥ ಸೇವೆ ಮಾಡಿ ಜನತೆಯ ಮೆಚ್ಚುಗೆಯನ್ನು ಪಡೆದಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ದಂತಹ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಸ್ವಚ್ಛತೆಯ ಆಂದೋಲನ ಹಾಗೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಕ್ರೀಡೆಗೆ ಪ್ರೋತ್ಸಾಹ ಉತ್ತಮ ಆರೋಗ್ಯಕ್ಕಾಗಿ ಯೋಗಾಸನ ಹಾಗೂ ವ್ಯಕ್ತಿತ್ವ ವಿಕಾಸನ ದಂತಹ ತರಬೇತಿ ಕಾರ್ಯಕ್ರಮಗಳು ಹಾಗೂ ರಾಷ್ಟ್ರೀಯ ಭಾವನೆಯನ್ನು ಮೂಡಿಸುವ ನಿರಂತರ ಪ್ರಯತ್ನ ಸಂಘ ಪರಿವಾರ ಇಂದು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದೇಶಕ್ಕಾಗಿ ತ್ಯಾಗ ಬಲಿದಾನ ಗೈದ ಮಹಾಪುರುಷರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನತೆಯ ಸೇವೆಯನ್ನು ಸಂಘದ ಕಾರ್ಯಕರ್ತರು ಯಾವುದೇ ಸಂಬಳವಿಲ್ಲದೆ ನಿಸ್ವಾರ್ಥದಿಂದ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಪುಣ್ಯಕಾರ್ಯಗಳು ನಿಮ್ಮ ಕಣ್ಣಿಗೆ ಗೋಚರಿಸುವುದಿಲ್ಲವೇ ? ಕೆಲವು ವಿಷಯಗಳನ್ನು ಪರಮಾರ್ಶಿಸದೆ ಬರೀ ಕಾಮಲೆ ಕಣ್ಣಿನಿಂದ ನೋಡಿದರೆ ಹೇಗೆ? ಹೃದಯ ವಂತಿಕೆಯಿಂದ ಒಮ್ಮೆ ಆರ್.ಎಸ್. ಎಸ್ ಶಾಖೆಗೆ ಭೇಟಿ ನೀಡಿ ಆಗ ನಿಮಗೆ ಸಂಘದ ಕಾರ್ಯಗಳ ಬಗ್ಗೆ ಅರಿವಾಗುತ್ತದೆ. ನಿಮ್ಮ ವಯಕ್ತಿಕ, ದ್ವೇಷ, ಅಸೂಯೆ ಕೆಳಮಟ್ಟದ ರಾಜಕಾರಣವನ್ನು ಬಿಟ್ಟು ಕ್ಷೇತ್ರದ ಜನತೆಯ ಆಶಯಗಳನ್ನು ಈಡೇರಿಸುವ ಕಡೆ ಗಮನ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿ, ನಮ್ಮ ಕಲಬುರಗಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಎಂದು ಕಿವಿಮಾತು ಹೇಳಿದ್ದಾರೆ.
