ಸಾತನೂರ ವಿಕಲಚೇತನ ಕುಟುಂಬದ ಮನೆಗೆ ಬೆಂಕಿ, ಸುಟ್ಟು ಕರಕಲಾದ 2.50 ಲಕ್ಷ ನಗದು ಹಣ, ಅಪಾರ ಪ್ರಮಾಣದ ಹಾನಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮದಲ್ಲಿ ವಿಕಲಚೇತನ ಕುಟುಂಬದ ಮನೆಗೆ ಭಾನುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಬಡಪಾಯಿ ಕುಟುಂಬಕ್ಕೆ ಕರಾಳ ದಿನವಾಗಿ ಗೋಚರಿಸಿತು.
ಗ್ರಾಮದ ಕೂಲಿ ಕಾರ್ಮಿಕರಾದ ಸುಮಿತ್ರಾ ಬಾಯಿ ಬಡಿಗೇರ್ ಎನ್ನುವವರ ಮನೆಯಲ್ಲಿ ಮೂರು ಜನ ಅಂಧ ಹೆಣ್ಣು ಮಕ್ಕಳು ಮತ್ತು ವಿಕಲಾಂಗ ಮಗ ವಾಸಮಾಡುವ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಕೂಲಿ ನಾಲಿ ಮಾಡಿ ಕೂಡಿಟ್ಟಿದ್ದ ಸುಮಾರು ಎರಡು ಲಕ್ಷ ಐವತ್ತು ಸಾವಿರ ನಗದು ಸೇರಿದಂತೆ ದವಸ ಧಾನ್ಯಗಳು ಮತ್ತು ಬಟ್ಟೆಗಳು ಸುಟ್ಟು ಕರಕಲಾಗಿದ್ದರಿಂದ ಕುಟುಂಬ ಬೀದಿಪಾಲು ಆದಂತಾಗಿದೆ.
ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮವಾಗಿ ನಗದು ಎರಡು ಲಕ್ಷ ಐವತ್ತು ಸಾವಿರ ಸೇರಿದಂತೆ ದವಸ ಧಾನ್ಯಗಳು ಮತ್ತು ಬಟ್ಟೆ ಸೇರಿದಂತೆ ಎಲ್ಲವು ಸುಟ್ಟು ಕರಕಲಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ಸಹಾಯಕ ಠಾಣಾಧಿಕಾರಿ ಶರಣಯ್ಯ ಗುತ್ತೇದಾರ ನೇತೃತ್ವದಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳು ದೌಡಾಯಿಸಿ ಅಗ್ನಿ ಅನಾಹುತ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ವಿಕಲಚೇತನರಿಂದ ಕೂಡಿದ ಕುಟುಂಬ ವಾಸಮಾಡುವ ಮನೆಗೆ ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಮನೆ ಸೇರಿದಂತೆ ಅಪಾರ ಪ್ರಮಾಣದ ಹಣ, ಆಹಾರ ಧಾನ್ಯ, ಬಟ್ಟೆ, ಬಾಂಡೆ ಮನೆಯ ಸಾಮಾನುಗಳು ಎಲ್ಲವೂ ನಾಶವಾಗಿವೆ, ಇದರಿಂದ ಇಡೀ ಕುಟುಂಬ ಬೀದಿಗೆ ಬಂದಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷ ಆಸಕ್ತಿ ವಹಿಸಿ ಸೂಕ್ತ ಪರಿಹಾರ ಜೊತೆಗೆ ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

