ಹೊರಗುತ್ತಿಗೆ ಪೌರ ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ | ಶಹಾಬಾದ ನಗರಸಭೆ ವಿರುದ್ಧ ಮರಿಯಪ್ಪ ಹಳ್ಳಿ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಇರಿಸುವ ಮತ್ತು ಕುಡಿಯುವ ನೀರು, ಕಸದ ವಿಲೇವಾರಿ ಬೇಸರವಿಲ್ಲದೆ ದಿನನಿತ್ಯ ಕೆಲಸವನ್ನು ನಿರ್ವಹಿಸುವ ನಗರಸಭೆ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಸಂಬಳ 14 ತಿಂಗಳಿಂದ ನೀಡದೆ ಅವರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಎದುರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರಸಭೆ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ಉಳಿದಿರುವ ಸಂಬಳವನ್ನು ನೀಡಲು ಮತ್ತು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರಸಭೆ ದಿನಗೂಲಿ ನೌಕರರಾದ 20 ಜನರಿಗೆ 14 ತಿಂಗಳಿಂದ ಸಂಬಳ ಹಾಗೂ ಹೊರಗುತ್ತಿಗೆ ನೌಕರರಾದ 40 ಜನರಿಗೆ 12 ತಿಂಗಳಿನಿಂದ ಸಂಬಳ ನೀಡದೆ ಯಂತ್ರದಂತೆ ಕೆಲಸ ಮಾಡಲು ಒತ್ತಡ ಹೇರಿ ಸಂಬಳವಿಲ್ಲದೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಕಾರ್ಮಿಕರ ಕುಟುಂಬ ಅವರ ಮಕ್ಕಳು ಶಿಕ್ಷಣ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ನಗರ ಸಭೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದರು.
ನಗರ ಸಭೆಯಲ್ಲಿ ಎಲ್ಲಾ ಕಾಮಗಾರಿಗಳ ಬಿಲ್ಲುಗಳು ಸಕಾಲಕ್ಕೆ ಪಾಸಾಗುತ್ತವೆ, ಆದರೆ ಪೌರ ಕಾರ್ಮಿಕರ ನೌಕರರ ಸಂಬಳ ಮಾತ್ರ ನಿಲ್ಲುತ್ತದೆ ಇದಕ್ಕೆ ಕಾರಣ ಲಂಚ ತಾಂಡವಾಡುತ್ತಿದೆ ಕಮಿಷನ್ ಕೊಟ್ಟರೆ ಮಾತ್ರ ಸಂಬಳ ಮಾಡುತ್ತೇವೆ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರ ಜೀವನದ ಜೊತೆ ಆಟ ಆಡಬೇಡಿ ಕೂಡಲೇ ನಗರ ಸಭೆಯ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ಉಳಿದ ಎಲ್ಲಾ ಸಂಬಳವನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸಂಬಳ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನಗರ ಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಮತ್ತು ದಿನಗೂಲಿ ನೌಕರರಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಸಂಬಳ ನೀಡುತ್ತೇನೆ ಮತ್ತು ನಗರಸಭೆ ಅಕೌಂಟೆಂಟ್ ನಾರಾಯಣ ರೆಡ್ಡಿ ವರ್ಗಾವಣೆ ಮಾಡಲು ಅಥವಾ, ಸೆಕ್ಷನ್ ಬೇರೆಯವರಿಗೆ ನೀಡಲು ಆಶ್ವಾಸನೆ ನೀಡಿದರು ಹಾಗೂ ಇತರೆ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನೀಲಪ್ರಭಾ ಬಬಲಾದ್ ಹಾಗೂ ಕಾಡಾ ಅಧ್ಯಕ್ಷ ಡಾ. ಎಂ.ಎ ರಶೀದ್, ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರಿ, ಉಪ ವಿಭಾಗದ ಸಂಚಾಲಕ ಉದಯ ಸಾಗರ, ಪೂಜಪ್ಪ ಮೇತ್ರಿ, ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರ, ಮಲ್ಲಿಕಾರ್ಜುನ ಹಳ್ಳಿ, ಶಿವಮೂರ್ತಿ ಪಟ್ಟೆದಾರ, ಮಲ್ಲಣ್ಣ ಮರತೂರ, ಹನುಮಂತ ಪವಾರ, ಈರಣ್ಣ ಕುರಿ, ಅನಿಲ ಹೊನಗುಂಟಿ, ಬಲಭೀಮ ಪವಾರ, ಮಲ್ಲಿಕಾರ್ಜುನ ಕಟ್ಟಿ, ನಗರ ಸಭೆ ಮಾಜಿ ಸದಸ್ಯರಾದ ರವಿ ರಾಠೋಡ್, ಶರಣು ಪಗಲಾಪೂರ, ಸೂರ್ಯಕಾಂತ ಕೋಬಾಳ ಸೇರಿದಂತೆ ನೂರಾರು ಜನ ಸಾರ್ವಜನಿಕರು, ನಗರಸಭೆ ನೌಕರರು ಭಾಗವಹಿಸಿದ್ದರು. ಪಿಎಸ್ಐ ಚಂದ್ರಕಾಂತ ಮಕಾಲೆ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

