ಶಹಾಪುರ ಲಿಂಗಣ್ಣ ಸತ್ಯಂಪೇಟೆ ಬದುಕು ಬರಹ ಉಪನ್ಯಾಸ, ಕ.ಕ.ದಲ್ಲಿ ಬಸವಾದಿ ಶರಣರ ವಿಚಾರ ಬಿತ್ತಿದವರಲ್ಲಿ ಸತ್ಯಂಪೇಟೆಯವರು ಒಬ್ಬರು: ಆನೇಗುಂದಿ
ನಾಗಾವಿ ಎಕ್ಸಪ್ರೆಸ್
ಶಹಾಪುರ: ಕಲ್ಯಾಣ ಕರ್ನಾಟಕದ ಈ ನೆಲದಲ್ಲಿ ಬಸವಾದಿ ಶರಣರ ವಿಚಾರಗಳನ್ನು ಬಿತ್ತಿದವರಲ್ಲಿ ಲಿಂಗಣ್ಣ ಸತ್ಯಂಪೇಟೆಯವರು ಸಹ ಬಹು ಮುಖ್ಯರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಹೇಳಿದರು.
ನಗರದ ಶ್ರೀ ಚರಬಸವೇಶ್ವರ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಯಾದಗಿರಿ ಜಿಲ್ಲೆಯ ಚಕೋರ ವಿಚಾರ ವೇದಿಕೆ ಅಡಿಯಲ್ಲಿ ನಡೆದ ಲಿಂಗಣ್ಣ ಸತ್ಯಂಪೇಟೆ ಬದುಕು ಬರಹ ಹೋರಾಟ ಪತ್ರಿಕೋದ್ಯಮ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ಇಂತಹ ಸಾಧಕರ ಬದುಕು ಬರಹ ಅರಿಯಬೇಕೆಂದು ಕರೆ ನೀಡಿದರು.
ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು ಅಕಾಡೆಮಿಯ ಕಾರ್ಯ ಚಟುವಟಿಕೆಗಳು ಕುರಿತು ಹಾಗೂ ಲಿಂಗಣ್ಣ ಸತ್ಯಂಪೇಟೆ ಅವರ ಬಗ್ಗೆ ವಿಶೇಷ ಉಪನ್ಯಾಸ ಅಕಾಡೆಮಿ ಮೂಲಕ ಮಾಡುವಂತಹ ಅವರ ಬಹುದೊಡ್ಡ ವ್ಯಕ್ತಿತ್ವ ಕುರಿತು ಅನೇಕ ಮಹತ್ವದ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವರು ಹಚ್ಚಿದ ಬಸವ ಬೆಳಗಿನಲ್ಲಿ ನಾವು ನೀವು ಮುನ್ನಡೆಯಬೇಕು ಎಂದು ತಮ್ಮ ಆಶಯ ನುಡಿಯ ಮೂಲಕ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಹಿರಿಯ ಕವಿ ಹಾಗೂ ಲಿಂಗಣ್ಣ ಸತ್ಯಂಪೇಟೆ ಅವರ ಒಡನಾಡಿಯಾಗಿದ್ದ ಶಿವಣ್ಣ ಇಜೇರಿಯವರು ಸವಿಸ್ತಾರವಾಗಿ ಅವರ ಜೀವನ ಕಥನ, ಹೋರಾಟ ಕುರಿತು ಮಾತನಾಡಿದರು. ಅನೇಕ ಘಟನೆಗಳನ್ನು ಹಂಚಿಕೊಂಡರು.
ಬಸವ ಮಾರ್ಗದಿ ನಡಿಯೋಣ ಎಂದು ಸುಶ್ರಾವ್ಯವಾಗಿ ಹಾಡುವ ಮೂಲಕ ತಂದೆಯಾಗಿ ಲಿಂಗಣ್ಣ ಸತ್ಯಂಪೇಟೆ ಅವರು ತಮ್ಮ ಮೇಲೆ ಬೀರಿದ ಪ್ರಭಾವ ಕುರಿತು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆಯವರು ಹಲವಾರು ಘಟನೆಗಳನ್ನು ಹೇಳಿ ವಿಧ್ಯಾರ್ಥಿಗಳು ಓದಿನ ಜೊತೆಗೆ ಸಾಹಿತ್ಯಿಕ ಕೃತಿಗಳ, ವಚನಗಳ ಓದು ಬದುಕಿನಲ್ಲಿ ಗಟ್ಟಿತನ ತರುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಣ್ಣಗೌಡ ಬಿರಾದಾರ ಅವರು ತಮ್ಮ ಹಾಗೂ ಸತ್ಯಂಪೇಟೆಯವರ ಕುಟುಂಬದವರ ಒಡನಾಟ ತಿಳಿಸಿ ಅಂತಹ ಹೋರಾಟದ ವ್ಯಕ್ತಿ ಇಲ್ಲವಾದಾಗ ತಾವು ಕಣ್ಣೀರು ಸುರಿಸಿದ ಸಂದರ್ಭ ವಿವರಿಸಿದರು. ಇಂತಹ ವ್ಯಕ್ತಿ ಪರಿಚಯ ಮಾಡುವ ಈ ವಿಶೇಷ ಉಪನ್ಯಾಸ ಕಾರ್ಯಕ್ರಮ ತಮ್ಮ ಕಾಲೇಜಿನಲ್ಲಿ ಮಾಡಿದ್ದಕ್ಕೆ ಅಕಾಡೆಮಿಯ ಅಧ್ಯಕ್ಷರಾದಿಯಾಗಿ ಎಲ್ಲರಿಗೂ ಗೌರವದ ಅಭಿನಂದನೆಗಳು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ನಿರ್ಮಲ ತುಂಬಗಿ ಅವರು ಅರ್ಥಪೂರ್ಣವಾಗಿ ನಿರ್ವಹಿಸಿ ಅವರು ಕೂಡಾ ಸತ್ಯಂಪೇಟೆ ಅವರ ಬಗೆಗಿನ ತಮ್ಮ ಹಲವಾರು ಅನಿಸಿಕೆಗಳನ್ನು ಹಂಚಿಕೊಂಡರು. ನೂರಾರು ವಿದ್ಯಾರ್ಥಿನಿಯರು, ಉಪನ್ಯಾಸಕರು ಭಾಗವಹಿಸಿದ್ದರು.

