Oplus_0

ಗುರುಮಠಕಲ್ ಪಥಸಂಚಲನಕ್ಕೆ ಅನುಮತಿಸಲು ಜಿಲ್ಲಾಡಳಿತ ವಿಳಂಬ ನೀತಿ ಖಂಡನೀಯ: ಸುರೇಶ ಅಂಬಿಗೇರ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಜಿಲ್ಲೆಯ ಗುರುಮಠಕಲ್ ನಲ್ಲಿ ಆರ್.ಎಸ್.ಎಸ್. ಪಥಸಂಚಲನಕ್ಕೆ ಕಳೆದ ಅ.25 ರಂದೇ ಅರ್ಜಿ ಸಲ್ಲಿಸಿದ್ದರೂ ಅನುಮತಿ ನೀಡಲು ಜಿಲ್ಲಾಡಳಿತ ಇದುವರೆಗೆ ಮುಂದಾಗದೇ ಇರುವುದು ನೇರವಾಗಿ ನ್ಯಾಯಾಂಗ ನಿಂದನೆಯಾಗುತ್ತದೆ ಇದು ಖಂಡನೀಯ ಎಂದು ನಗರಸಭೆ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅದ್ಯಕ್ಷ ಸುರೇಶ ಅಂಬಿಗೇರ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಧಾರವಾಡ ಹೈಕೋರ್ಟ ಪೀಠ, ಸಂಘ ಸಂಸ್ಥೆಗಳ ನಿರ್ಬಂಧದ ಸರ್ಕಾರದ ಕ್ರಮಕ್ಕೆ ಚಾಟಿ ಬೀಸಿದ್ದು, ಆ ಆದೇಶವನ್ನೇ ತಡೆಹಿಡಿದಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಇನ್ನು ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಎಲ್ಲ ಸಂಘ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಮಾಡಲು ಸಂವಿಧಾನದತ್ತ ಹಕ್ಕುಗಳನ್ನು ಹೊಂದಿದ್ದು, ಅಂತಹ ಹಕ್ಕು ಮೊಟಕು ಗೊಳಿಸುವ ಸರ್ಕಾರದ ದಡ್ಡತನದ ಕೃತ್ಯ ಎಂಬ ಸಂದೇಶವನ್ನು ಹೈಕೋರ್ಟ ತಡೆಯಾಜ್ಞೆ ನೀಡಿದೆ.

ಆದರೆ ಇದಾವುದನ್ನು ಕಂಡೂಕಾಣದಂತೆ ಜಿಲ್ಲಾಡಳಿತ ಮಾತ್ರ ಒತ್ತಡಕ್ಕೆ ಒಳಗಾದವರಂತೆ ವರ್ತಿಸುತ್ತಿರುವುದು ಸರಿಯಲ್ಲ, ಜಿಲ್ಲಾ ದಂಡಾಧಿಕಾರಿಗಳು ನ್ಯಾಯಾಧೀಶರಂತೆ ವರ್ತಿಸಬೇಕೇ ಹೊರತು ಆಡಳಿತ ಪಕ್ಷದ ತೊತ್ತಾಗಿ ಕೆಲಸ ಮಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ಸಹ ಸಮಸ್ಯೆ ರಹಿತವಾದ ಪೂರಕ ವರದಿ ನೀಡಿದೆ ಎಂಬ ಮಾಹಿತಿ ಇದೆ. ಹೀಗಿದ್ದಾಗ್ಯೂ ಜಿಲ್ಲಾಡಳಿತ ಮೀನಾ ಮೇಷ ಎಣಿಸುವುದು ನೋಡಿದರೆ ಆಡಳಿತಾರೂಢರಿಗೆ ಈಡಾಗಿರುವುದು ಮೇಲ್ನೋಟಕ್ಕೆ ಅನ್ನಿಸದೇ ಇರದು, ಇಂತಹ ಅನುಮಾನಗಳಿಗೆ ಅವಕಾಶ ನಿಡದೇ ನಿಷ್ಪಕ್ಷಪಾತವಾಗಿ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೂಡಲೇ ವಿಳಂಬ ಮಾಡದೇ ಸಂಘದ ಪಥಸಂಚಲನ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಮತ್ತು ಸೂಕ್ತ ಪೂರಕ ಕ್ರಮಗಳು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!