Oplus_131072

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ: ಬೆಚ್ಚಿಬಿದ್ದ  ಭಾಗೋಡಿ ಗ್ರಾಮಸ್ಥರು!

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪ್ರೀತಿ, ವಿಶ್ವಾಸದ ಸಂಕೇತವಾಗಿರುವ ದಾಂಪತ್ಯ ಜೀವನವನ್ನೇ ಕಗ್ಗೊಲೆ ಮಾಡಿದ ಆಘಾತಕಾರಿ ಘಟನೆಯೊಂದು ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಭೀಕರ ಕೃತ್ಯ ಗುರುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಭಾಗೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಘಟನೆ ವಿವರ: ಕೊಲೆಯಾದ ದುರ್ದೈವಿ ತಿಪ್ಪಣ್ಣ (ಕುಪೇಂದ್ರ), (30) ಆತನ ಪತ್ನಿ ಶಾಂತಮ್ಮ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಿಪ್ಪಣ್ಣನ ಮುಖಕ್ಕೆ ದಿಂಬು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಿಯಕರನೊಂದಿಗೆ ಇರುವ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದೇ ಈ ಘೋರ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಕೊಲೆ ನಡೆದಾಗ ತಿಪ್ಪಣ್ಣ ಜೋರಾಗಿ ಕಿರುಚಿದ್ದಾನೆ, ಶಬ್ದ ಕೇಳಿ ಅಕ್ಕಪಕ್ಕದವರು ತಿಪ್ಪಣ್ಣನ ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ನೆರೆಹೊರೆಯವರು ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ನಡುವೆ, ಪ್ರಿಯಕರ ಮನೆಯ ಅಟ್ಟದ ಮೇಲಿನ ಕಿಟಕಿಯಿಂದ ಪರಾರಿಯಾಗಿದ್ದಾನೆ.

ಪತ್ನಿಯ ಬಂಧನ, ಪ್ರಿಯಕರ ಪರಾರಿ: ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶಾಂತಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಪ್ರಿಯಕರನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮಾಹಿತಿ ನೀಡಿದ್ದಾರೆ.

ಕೊಲೆಯಾದ ತಿಪ್ಪಣ್ಣನ ಶವವನ್ನು ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಎಎಸ್‌ಐ ಲಾಲ್ ಅಹ್ಮದ್ ಹಾಗೂ ಸಿಬ್ಬಂದಿಗಳಾದ ದತ್ತು ಜಾನೆ, ರವಿಕುಮಾರ, ಸವಿಕುಮಾರ, ಅನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!