ಕಲಬುರಗಿಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಬೃಹತ್ ಪ್ರತಿಭಟನೆ | ಕಾಂಗ್ರೆಸ್ ಮಹಿಳಾ ವಿರೋಧಿ: ಬಾಲರಾಜ್ ಗುತ್ತೇದಾರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಮಹಿಳಾ ಮೀಸಲಾತಿ ವಿಧೇಯಕದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡೆಯನ್ನು ಖಂಡಿಸಿ ಕಲಬುರಗಿ ನಗರದಲ್ಲಿ ಜಾತ್ಯತೀತ ಜನತಾದಳ ಪಕ್ಷ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಮಾತನಾಡಿ, 1996 ರ 2026 ರಲ್ಲಿ ಕರಾಳ ಇತಿಹಾಸ ಮರುಕಳಿಸಿದೆ, ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂದು ಹೆಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಇಂದು ಆವತ್ತು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟಹೆಜ್ಜೆ ಇರಿಸಿದ್ದರು. ಪುನಾ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಪ್ರಧಾನಿ ಮೋದಿ ಅವರ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಅವರು ಕಿಡಿಕಾರಿದ್ದಾರೆ.
ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಇಂಡಿ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಮಹೇಶ್ವರಿ ವಾಲಿ ಮಾತನಾಡಿ, ರಾಜಕೀಯ ಮೀಸಲಾತಿ ಲಭಿಸುವ ಹಿನ್ನೆಲೆಯಲ್ಲಿ ನಾವು ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು, ಅದು ಈಗ ಆಕ್ರೋಶವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದರು
ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ನರೇಂದ್ರ ಮೋದಿ ಅವರು ಮಾಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ. ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ್ ಬೀರಬಿಟ್ಟೆ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ್ ಸಂಗಣಿ, ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ, ರವಿಶಂಕರ್ ರೆಡ್ಡಿ, ಮಂಜುಗೌಡ ಪಾಟೀಲ್, ರಿಜವಾನ್ ಆಹೆಮದ್, ಪ್ರವೀಣ್ ಜಾಧವ್, ರಾಜೇ ಪಟೇಲ್, ಕಿರಣ್ ಪಾಟೀಲ್, ಶಿವಲಿಂಗಪ್ಪ ಪಾಟೀಲ್, ಅನ್ವರ್ ಪಟೇಲ್, ಸಾಬೀರ್ ಗನಿ, ನಾಗಯ್ಯ ಸ್ವಾಮಿ, ನಾಗಣ್ಣ ವಾರದ ಶ್ರೀಧರ್, ಮಹೇಶ್ವರಿ ವಾಲಿ, ಅನುರಾಧ, ಮಹನಂದ ಪಡಶೆಟ್ಟಿ, ಚಂದ್ರಕಲಾ, ಪದ್ಮಿನಿ, ಫತ್ರುಬಿ, ವಿಜಯಶ್ರೀ, ಮಹಾದೇವಿ, ಗೀತಾ, ಸಂಗೀತಾ, ಭಾಗ್ಯಶ್ರೀ, ಮಮತಾ, ಬಬಿತಾ, ಮಲ್ಲಮ್ಮ, ಪ್ರಭಾವತಿ, ನೀಲಮ್ಮ, ಪೂರ್ಣಿಮಾ, ಪ್ರೇಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

