Oplus_0

ಚಿತ್ತಾಪುರದಲ್ಲಿ ಮಹಾಶಿವರಾತ್ರಿ ಹಬ್ಬ ಶ್ರದ್ಧಾಭಕ್ತಿಯಿಂದ ಆಚರಣೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕಿನ ವಿವಿಧ ಶಿವ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತಾದಿಗಳು ಸಾಲುಗಟ್ಟಿ ನಿಂತು ಶಿವಲಿಂಗದ ದರ್ಶನ ಪಡೆದರು.

ಹಬ್ಬದ ಪ್ರಯುಕ್ತ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಕಟ್ಟುನಿಟ್ಟಿನ ಉಪವಾಸ ವ್ರತವನ್ನು ಕೈಗೊಂಡು ಶಿವನ ಧ್ಯಾನದಲ್ಲಿ ತೊಡಗಿದ್ದರು. ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆಗಳು ಹಗಲಿರುಳು ನಿರಂತರವಾಗಿ ನಡೆದವು. ಉಪವಾಸವಿದ್ದ ಭಕ್ತರು ಹಣ್ಣು-ಹಂಪಲು ಹಾಗೂ ಲಘು ಆಹಾರ ಸೇವಿಸಿ ದೇವಸ್ಥಾನಗಳಿಗೆ ಭೇಟಿ ನೀಡಿ ಪುನೀತರಾದರು.

ಶಿವರಾತ್ರಿಯ ಪ್ರಮುಖ ಅಂಗವಾದ ಭಾನುವಾರ ರಾತ್ರಿ ಜಾಗರಣೆಯ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಲ್ಲವರಿಂದ ಶಿವಪುರಾಣ ಪ್ರವಚನ, ಕೀರ್ತನೆಗಳು ನಡೆದವು. ಭಕ್ತರು ಇಡೀ ರಾತ್ರಿ ಉಪವಾಸ ಹಾಗೂ ಜಾಗರಣೆಯ ಮೂಲಕ ಶಿವನಾಮ ಸ್ಮರಣೆ ಮಾಡುತ್ತಾ ಭಜನೆಯಲ್ಲಿ ತೊಡಗಿದ್ದರು.

ಕ್ಷತ್ರೀಯ ಓಣಿಯಲ್ಲಿ ಭಜನಾ ವೈಭವ :

ಪಟ್ಟಣದ ಕ್ಷತ್ರೀಯ ಓಣಿಯ ಈಶ್ವರ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇಲ್ಲಿನ ಭೋಲೇನಾಥ ಭಜನಾ ಮಂಡಳಿಯಿಂದ ಏರ್ಪಡಿಸಲಾಗಿದ್ದ ಭಜನಾ ಕಾರ್ಯಕ್ರಮವು ಭಕ್ತರ ಮನ ಗೆದ್ದಿತು. ಶಿವನ ಮಹಿಮೆಯನ್ನು ಸಾರುವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಿದರು.

Spread the love

Leave a Reply

Your email address will not be published. Required fields are marked *

error: Content is protected !!